

ಬೆಳಗಾವಿ: ಒಬ್ಬರ ಜಮೀನು ಮತ್ತೊಬ್ಬರು ಲಪಟಾಯಿಸಿ ವಂಚಿಸುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಅದನ್ನು ತಡೆಗಟ್ಟಲು ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 4 ಕೋಟಿ ಜಮೀನು ಮಾಲೀಕರಿದ್ದಾರೆ. ಈ ಪೈಕಿ ಈಗಾಗಲೇ 1.48 ಕೋಟಿ ಮಾಲೀಕರ ಜಮೀನುಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಜುಲೈ 15ರೊಳಗೆ ಇನ್ನುಳಿದ ಜಮೀನುಗಳಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು. ಆರ್‌ಟಿಸಿಗಳಿಗೆ ಆಧಾರ ಜೋಡಣೆ ಮಾಡುವುದರಿಂದ ನಕಲಿ ದಾಖಲೆ ಸೃಷ್ಟಿಸಿ ಒಬ್ಬರ ಜಮೀನು ಮತ್ತೊಬ್ಬರು ಲಪಟಾಯಿಸಲು ಬರುವುದಿಲ್ಲ ಮತ್ತು ಯಾವುದೇ ವ್ಯವಹಾರ ಮಾಡುವುದಕ್ಕೆ ಸರಳೀಕರಣವಾಗಲಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದಿಂದ ಈಗಾಗಲೇ 3,454 ಕೋಟಿ ರೂ. ಬರ ಪರಿಹಾರ ಬಂದಿದೆ. ಅದರಲ್ಲಿ ರಾಜ್ಯದ 35 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಬಾಕಿ ಇರುವ 4-5 ಲಕ್ಷ ರೈತರಿಗೆ ಬರ ಪರಿಹಾರ ವಿತರಿಸುತ್ತೇವೆ. ಕೇಂದ್ರ ಸರ್ಕಾರ ಹೆಚ್ಚುಚರಿ ಬರ ಪರಿಹಾರದ ಹಣ ಕೊಡಲು ಒಪ್ಪುತ್ತಿಲ್ಲ. ಈ ವಿಚಾರ ಕೋರ್ಟ್‌ನಲ್ಲಿದೆ. ಆ ಬಗ್ಗೆಯೂ ಹೋರಾಟ ನಡೆಸಿದ್ದೇವೆ ಎಂದರು.
ಸ್ಮಶಾನಭೂಮಿ ಸರಹದ್ದು ಗುರುತು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದು ವೇಳೆ ಒತ್ತುವರಿಯಾಗಿದ್ದರೆ ಕಾಲಮೀತಿಯಲ್ಲಿ ವರದಿ ಕೊಡಬೇಕು. ಜು.8ಕ್ಕೆ ಎಲ್ಲ ಸ್ಮಶಾನ ಹಾಗೂ ಕೆರೆಗಳಿಗೆ ನಮ್ಮ ಕಂದಾಯ ಅಧಿಕಾರಿಗಳು ಭೇಟಿ ಕೊಡಲಿದ್ದಾರೆ. ಸ್ಮಶಾನಭೂಮಿಯನ್ನು ಎನ್‌ಎ ಮಾಡಿಕೊಂಡಿದ್ದರೆ ಅದು ಅಪರಾಧವಾಗುತ್ತದೆ. ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಡಿಸಿಎಂ ಆಕಾಂಕ್ಷಿಯಲ್ಲ. ಕಾಂಗ್ರೆಸ್ ನನಗೆ ಅರ್ಹತೆಗೂ ಮೀರಿ ಹುದ್ದೆ ನೀಡಿದೆ. ಈ ಹುದ್ದೆಯಲ್ಲೇ ಚೆನ್ನಾಗಿ ಕೆಲಸ ಮಾಡಿ ನಾಲ್ಕು ಜನರಿಗೆ ಅನುಕೂಲವಾಗುವ ಕೆಲಸ ಮಾಡಿ ಸಾರ್ಥಕ್ಯ ಕಂಡುಕೊಳ್ಳೋಣ. ನಾಲ್ಕು ಗೋಡೆ ಮಧ್ಯೆ ಡಿಸಿಎಂ ಬಗ್ಗೆ ಚರ್ಚೆಯಾಗಬೇಕು. ಆ ಕುರಿತು ಸಾರ್ವಜನಿಕವಾಗಿ ಮಾತನಾಡುವುದು ಸರಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.