

* ರಾಣಿ ಪೇಟೆ ನಿವಾಸಿ ಲಕ್ಷ್ಮೀದೇವಿ ಸಾವು
* ೩ ದಿನಗಳಲ್ಲಿ ೫೬ ಜನರು ಅಸ್ವಸ್ಥ
ಹೊಸಪೇಟೆ: ಕಲುಷಿತ ನೀರು ಸೇವನೆಯಿಂದ ೫೦ ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಗರದ ರಾಣಿ ಪೇಟೆಯಲ್ಲಿ ನಡೆದಿದೆ.
ಕಳೆ ಎರಡ್ಮೂರು ದಿನಗಳಿಂದ ನಗರದ ೭ ನೇ ವಾರ್ಡ್ ನ ರಾಣಿ ಪೇಟೆ ಭಾಗದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಅನೇಕರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ. ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಿ (೫೫) ಎಂಬುವವರು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ಆರೋಗ್ಯ ಇಲಾಖೆಯಿಂದ ಸಮೀಕ್ಷೆ:
ಕಲುಷಿತ ನೀರು ಸೇವನೆಯಿಂದ ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರೋಗ್ಯ ಸಮೀಕ್ಷೆಗೆ ಕೈಗೊಂಡಿದೆ.
ಡಾ.ದಿವ್ಯಾ ನೇತೃತ್ವದಲ್ಲಿ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸುಮಾರು ೫೬ ಜನರು ವಾಂತಿ- ಬೇಧಿಯಿಂದ ಇಲ್ಲಿನ ೧೦೦ ಬೆಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ನೀರಿನ ಪೂರೈಕೆ ಅವ್ಯವಸ್ಥೆ:
ನಗರದಲ್ಲಿ ೨೪*೭ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದು ದಶಕ ಕಳೆದರೂ ಸರ್ಮಪಕವಾಗಿ ಅನುಷ್ಠಾನಗೊಂಡಿಲ್ಲ. ಹಲವೆಡೆ ಹಳೇ ಪೈಪ್ ನಲ್ಲೇ ನೀರು ಪೂರೈಕೆಯಾಗುತ್ತಿದ್ದು, ಚರಂಡಿ ಸೇರುತ್ತಿವೆ.
ಅಲ್ಲದೇ, ಸ್ಥಳೀಯ ಶಾಸಕ ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಜನ ಸಂಪರ್ಕ ಕಚೇರಿ ಮತ್ತು ಹಳೆ ಮನೆ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ನಗರದ ನೀರು ಪೂರೈಕೆಯಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ಎನ್.ರೂಪೇಶ, ಕಳೆದ ಮೂರು ದಿನಗಳಿಂದ ವಾರ್ಡ್ ನ ಹಲವರಿಗೆ ವಾಂತಿ- ಬೇಧಿ ಕಾಣಿಸಿಕೊಂಡಿದೆ. ಹೀಗಾಗಿ ನಗರಸಭೆ ಟ್ಯಾಂಕರ್ ಮೂಲಕ ಶುದ್ಧ ನೀರು ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.