

ಬ್ರಹ್ಮಾವರ: ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಆಕಾಶವಾಣಿ ಮರುಪ್ರಸಾರ ಕೇಂದ್ರದ ಉತ್ತರ ಭಾಗ ಕಲ್ಬೆಟ್ಟು ಎಂಬಲ್ಲಿ ಮನೆಯೊಂದರಿಂದ ಕಲುಷಿತ ನೀರು ರಸ್ತೆಗೆ ಬಿಡಲಾಗುತ್ತಿದ್ದು, ಇದರಿಂದ ಸುತ್ತಮುತ್ತಲ ಪ್ರದೇಶ ದುರ್ವಾಸನೆಗೆ ತುತ್ತಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ನೀರು ಇದೇ ರಸ್ತೆ ಮೇಲೆ ಹರಿದು ಹೋಗುತ್ತಿದ್ದು, ಮಳೆಯ ನೀರಿನೊಂದಿಗೆ ಈ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಂದಾಡಿ ಗ್ರಾಮ ಪಂಚಾಯಿತಿಗೂ ಈ ಕುರಿತು ಹಲವು ಬಾರಿ ದೂರು ನೀಡಲಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಶೀಘ್ರವೇ ಸೂಕ್ತ ವ್ಯವಸ್ಥೆ ಮಾಡಬೇಕಿದ್ದು, ಕ್ರಮಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.