ಮೈಸೂರು: ನಗರಕ್ಕೆ ಹೊಂದಿಕೊಂಡಂತಿರುವ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥರಾಗಿ, ಒಬ್ಬ ಸಾವನ್ನಪ್ಪಿದ ಘಟನೆ ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಸುಂದರ್ ಪ್ರೇಮ್‌ಕುಮಾರ್ ದೂರಿದರು.
ಕಳೆದ ಆಗಸ್ಟ್‌ನಲ್ಲಿ ಚಿತ್ರದುರ್ಗ ನಗರಸಭೆಯ ಕಾವಾಡಿಗರ ಹಟ್ಟಿಯಲ್ಲಿ ಇದೇ ರೀತಿ ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ್ದರು. ಕೆಲವೇ ವಾರ ಹಿಂದೆ ವರುಣ ಕ್ಷೇತ್ರ ವ್ಯಾಪ್ತಿಯ ತಗಡೂರು ಗ್ರಾಮದಲ್ಲಿಯೂ 110 ಜನ ವಾಂತಿ ಭೇದಿಯಿಂದ ಬಳಲಿದ್ದರು. ಅಷ್ಟಾಗಿಯೂ ಸರ್ಕಾರ ಎಚ್ಚೆತ್ತುಕೊಳ್ಳದೆ ಇದ್ದದ್ದು ದುರಂತ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿಯೂ ಇದೇ ರೀತಿ ಜನತೆ ಅಸ್ವಸ್ಥರಾದ ವರದಿಯಾಗಿದೆ. ಹೀಗಾಗಿ ಈ ರೀತಿಯ ಅವಘಡಗಳು ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿ ವರ್ಗ, ಗ್ರಾಪಂ ಸದಸ್ಯರು ಎಚ್ಚೆತ್ತುಕೊಂಡಿಲ್ಲ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸಿ.ವೈ.ನಾಗರಾಜು, ರವಿಕುಮಾರ್, ರಾಜೇಗೌಡ ಇದ್ದರು.