ಕಂಟೈನ್ಮೆಂಟ್ ಜೋನ್‌ನಲ್ಲಿ ಎಲ್ಲವೂ ಕಟ್ಟುನಿಟ್ಟು

Corona
Published on

ಮಂಗಳೂರು: ನಿಯಂತ್ರಿತ ವಲಯ (ಕಂಟೈನ್ಮೆಂಟ್ ಜೋನ್) ಪ್ರದೇಶಗಳಲ್ಲಿ ದಿನಸಿ, ಹಾಲು, ಮಾಂಸ, ಔಷಧ ಸೇರಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಲು ಹಾಗೂ ಯಾವುದೇ ಅಗತ್ಯ ವಸ್ತು ಗಳಿಗಾಗಿ ಜನರು ಮನೆಯಿಂದ ಹೊರಬರಬಾರದಂತೆ ದ.ಕ.ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.

ಆಯಾ ವಲಯದ ಘಟಕ ನಿಯಂತ್ರಕರು ನಿಯಂತ್ರಿತ ವಲಯದೊಳಗೆ ಅಗತ್ಯ ವಸ್ತು ಮತ್ತು ಸೇವೆ ಒದಗಿಸುವ ತಂಡ ರಚಿಸಿ, ನ್ಯಾಯಬೆಲೆ ಅಂಗಡಿಯಿಂದ ನೀಡಲಾಗುವ ರೇಷನ್ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ. ನಗರ ವ್ಯಾಪ್ತಿಯ ನಿಯಂತ್ರಿತ ವಲಯದ ಸುತ್ತಲಿನ 5 ಕಿ.ಮೀ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 7 ಕಿ.ಮೀ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಆಯಾ ವಲಯದಲ್ಲಿ ದೈನಂದಿನ ನಿರ್ವಹಣೆಯ ಹೊಣೆಗಾರಿಕೆ ಅಲ್ಲಿನ ಘಟಕ ನಿಯಂತ್ರಕರದ್ದು. ಅವರು ನಿಯಂತ್ರಣ ಕೊಠಡಿಯೊಂದನ್ನು ರಚಿಸಿ ಪೊಲೀಸ್, ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಪ್ರತಿನಿಧಿ ನಿಯೋಜಿಸಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಪೊಲೀಸರ ಜವಾಬ್ದಾರಿ: ನಿಯಂತ್ರಿತ ವಲಯದಿಂದ ಯಾವೊಬ್ಬರೂ ಹೊರಕ್ಕೆ ಹೋಗದಂತೆ/ಒಳಕ್ಕೆ ಬಾರದಂತೆ ನಿಯಂತ್ರಿಸುವುದು ಹಾಗೂ ವಾಹನಗಳು ರಸ್ತೆಗಿಳಿಯದಂತೆ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಲಯವನ್ನು ಸೀಲ್‌ಡೌನ್ ಮಾಡಬೇಕು. ಪೊಲೀಸರು ಕರ್ಫ್ಯೂ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದು, ಅಗತ್ಯ ಸೇವೆ ಮತ್ತು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಎಮರ್ಜೆನ್ಸಿ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಆರೋಗ್ಯ ಇಲಾಖೆ ಕೆಲಸಗಳು

ತಾಲೂಕು ಆರೋಗ್ಯಾಧಿಕಾರಿ ಆಯಾ ವಲಯದಲ್ಲಿ ಆರೋಗ್ಯ ಇಲಾಖೆ ಪಾಲಿಸಬೇಕಾದ ಕ್ರಮಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು, ಆರೋಗ್ಯ ಹೊರಠಾಣೆ ಸ್ಥಾಪಿಸಬೇಕು. ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದ ಸಂಪರ್ಕಿತರನ್ನು ಪತ್ತೆಹಚ್ಚಿ ಅಪಾಯದಲ್ಲಿರುವ(ಹೈರಿಸ್ಕ್ ಪ್ರಾಥಮಿಕ) ಸಂಪರ್ಕಿತರನ್ನು ಸಾಂಸ್ಥಿತ ದಿಗ್ಬಂಧನಕ್ಕೆ ಒಳಪಡಿಸಿ, ಕಡಿಮೆ ಅಪಾಯದಲ್ಲಿರುವ(ಲೋ ರಿಸ್ಕ್ ಸೆಕೆಂಡರಿ) ಸಂಪರ್ಕಿತರನ್ನು ಗೃಹ ದಿಗ್ಬಂಧನಕ್ಕೆ ಒಳಪಡಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿ ದಿನ 50 ಮನೆಗಳಿಗೆ ಭೇಟಿ ನೀಡ ಜನರ ಆರೋಗ್ಯ ತಪಾಸಣೆ ನಡೆಸಬೇಕು. ಚಿಕಿತ್ಸೆ ಅಗತ್ಯವಿದರೆ ಕ್ರಮ ಕೈಗೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯ ಮಾಸ್ಕ್ ಬಳಕೆಗೆ ಸೂಚಿಸುವುದು.

ಇವು ಕಂಟೈನ್ಮೆಂಟ್ ಗಡಿಗಳು

ಬಂಟ್ವಾಳದ ಸಜಿಪ ನಡು ಗ್ರಾಮ-ಉತ್ತರಕ್ಕೆ ಕೇಂದ್ರ ಜುಮ್ಮಾ ಮಸೀದಿ, ದಕ್ಷಿಣಕ್ಕೆ ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿ, ಪೂರ್ವಕ್ಕೆ ಲಕ್ಷ್ಮಣ ಕಟ್ಟೆ, ಪಶ್ಚಿಮಕ್ಕೆ ಶ್ರೀರಾಮ ಭಜನಾ ಮಂದಿರ. ಬಂಟ್ವಾಳದ ತುಂಬೆ ಗ್ರಾಮ-ಉತ್ತರಕ್ಕೆ ತುಂಬೆ ಶಾಲೆ, ದಕ್ಷಿಣಕ್ಕೆ ಮಡಕ, ಪೂರ್ವಕ್ಕೆ ಭಾರತ್ ಆಗ್ರೋ, ಪಶ್ಚಿಮಕ್ಕೆ ತುಂಬೆ ಮಹಾಲಿಂಗೇಶ್ವರ ದೇವಸ್ಥಾನ*ಬೆಳ್ತಂಗಡಿ ಕರಾಯ ಗ್ರಾಮ-ಉತ್ತರಕ್ಕೆ ತುರ್ಕಲಿಕೆ ರಸ್ತೆ, ದಕ್ಷಿಣಕ್ಕೆ ಜನತಾ ಕಾಲನಿ, ಪಶ್ಚಿಮಕ್ಕೆ ತುರ್ಕಳಿಕೆ ರಸ್ತೆ, ಪೂರ್ವಕ್ಕೆ ಕಲ್ಲೇರಿ-ಮಡಂತ್ಯಾರು ರಸ್ತೆ.*ಪುತ್ತೂರಿನ ಸಂಪ್ಯ ಗ್ರಾಮ-ಉತ್ತರಕ್ಕೆ ಲಕ್ಷ್ಮಣ ಶೆಟ್ಟಿ ಮನೆ, ದಕ್ಷಿಣಕ್ಕೆ ಪಂಚಾಯಿತಿ ರಸ್ತೆ, ಪೂರ್ವಕ್ಕೆ ಕುಂಜ್ಯ ಬ್ಯಾರಿ ಮನೆ, ಪಶ್ಚಿಮಕ್ಕೆ ಅಬ್ದುಲ್ ರಹಿಮಾನ್ ಅವರ ಮನೆ ಆವರಣ ಗೋಡೆ. ಸುಳ್ಯದ ಅಜ್ಜಾವರ ಗ್ರಾಮ-ಉತ್ತರಕ್ಕೆ ಸವೇರಾ ರೈ ಮನೆ, ದಕ್ಷಿಣಕ್ಕೆ ಅಚ್ಚಾರು ಬ್ಯಾರಿ ಮನೆ, ಪೂರ್ವಕ್ಕೆ ಅಜ್ಜಾವರ-ಅಂಕೋತಿಮಾರ್ ರಸ್ತೆ ಮತ್ತು ಕಾಡು, ಪಶ್ಚಿಮಕ್ಕೆ ಕೃಷಿ ಭೂಮಿ*ತೊಕ್ಕೊಟ್ಟು ಸ್ಮಾರ್ಟ್ ಪ್ಲಾೃನೆಟ್-ಉತ್ತರಕ್ಕೆ ತೊಕ್ಕೊಟ್ಟು ಬಸ್ ನಿಲ್ದಾಣ, ದಕ್ಷಿಣಕ್ಕೆ ಸ್ಫೂರ್ತಿ ಕ್ಲಿನಿಕ್, ಪೂರ್ವಕ್ಕೆ ಚೆಂಬುಗುಡ್ಡೆ, ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿ 66*ಪುತ್ತೂರಿನ ಉಪ್ಪಿನಂಗಡಿ ಗ್ರಾಮ-ಉತ್ತರಕ್ಕೆ ಗ್ರಾಪಂ ರಸ್ತೆ, ದಕ್ಷಿಣಕ್ಕೆ ಕೆ.ವಿ.ಶೆಟ್ಟಿ ಮನೆ, ಪೂರ್ವಕ್ಕೆ ಹಿದ್ರೋಸ್ ಮನೆ, ಪಶ್ಚಿಮಕ್ಕೆ ಸವಿತಾ ಭಟ್ ಮನೆ.

ಯಾವೆಲ್ಲ ಗ್ರಾಮಗಳು ಸೀಲ್‌ಡೌನ್?

ಕರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ದ.ಕ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲನಿ, ಮಂಗಳೂರು ತಾಲೂಕಿನ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್, ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net