

ಯಲ್ಲಾಪುರ:ಚಲಿಸುತ್ತಿದ್ದ ಕಂಟೇನರ್ ಲಾರಿಯೊಂದು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋದ (container burned) ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಬಾಗಲಕೋಟೆಯಿಂದ ಕೇರಳಕ್ಕೆ ಸಕ್ಕರೆ ತುಂಬಿಕೊಂಡು ಹೊರಟಿದ್ದ ಲಾರಿಯ ಬ್ರೇಕ್ ಲೈನರ್ ಹೀಟ್ ಆಗಿ, ಬೆಂಕಿ ಹೊತ್ತಿಕೊಂಡಿದೆ.
ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ.
ವ್ಯಾಪಿಸಿದ ಬೆಂಕಿಗೆ ಸಕ್ಕರೆ ಸಹಿತ ಸಂಪೂರ್ಣ ಲಾರಿ ಆಹುತಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ಆರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಲಾರಿ ಸಂಪೂರ್ಣ ಸುಟ್ಟು ಹೋಗಿತ್ತು.
ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸುಟ್ಟ ಲಾರಿಯನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.