ಮಳೆಗಾಲದಲ್ಲಿ ಕಲುಷಿತ ನೀರಿನ ಸೇವನೆ, ಸೊಳ್ಳೆಗಳ ಉತ್ಪತ್ತಿ ಹೆಚ್ಚಳಕ್ಕೆ ಕಾಯಿಲೆಗಳು ಹರಡುವ ಆತಂಕ

11
Published on

ಚಿಕ್ಕಬಳ್ಳಾಪುರ: ಮಳೆಗಾಲದಲ್ಲಿ ಕಲುಷಿತ ನೀರಿನ ಸೇವನೆ, ಸೊಳ್ಳೆಗಳ ಉತ್ಪತ್ತಿ ಹೆಚ್ಚಳದಿಂದ ಕಾಯಿಲೆಗಳು ಹರಡುತ್ತಿರುವುದು ಆತಂಕ ಮೂಡಿಸಿದೆ.

ಇತ್ತೀಚೆಗೆ ಚಿಂತಾಮಣಿ ತಾಲೂಕಿನ ವೀರಪಲ್ಲಿಯಲ್ಲಿ ನಾಲ್ವರು ಹಿರಿಯರು ಮೃತಪಟ್ಟಿದ್ದು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆತಂಕದ ಸಂದೇಶಗಳು ಹರಿದಾಡುತ್ತಿವೆ. ಇದರ ನಡುವೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಲಾರ್ಟ್ ಆಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪರಿಹಾರ ಕೆಲಸಗಳನ್ನು ಕೈಗೊಳ್ಳುತ್ತಿದೆ.

* ಆತಂಕಪಡುವ ಅವಶ್ಯಕತೆ ಇಲ್ಲ

ಚಿಂತಾಮಣಿ ತಾಲೂಕಿನ ವೀರಪಲ್ಲಿಯಲ್ಲಿ ಕಲುಷಿತ ನೀರು ಸೇವನೆ ಹಾಗೂ ವಾಂತಿ ಭೇದಿ ಕಾರಣದಿಂದ ಯಾವುದೇ ಮರಣ ಸಂಭವಿಸಿಲ್ಲ. ಮೇ.21 ರಿಂದ ಜೂ.7 ರವರೆಗೆ ವರದಿಯಾದ 4 ಮರಣ ಪ್ರಕರಣಗಳಲ್ಲಿ 70 ವರ್ಷ ಮೇಲ್ಪಟ್ಟವರು ಇದ್ದು ಇತರೆ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ

ಜನಸಂಖ್ಯೆ ನಿಯಂತ್ರಣ, ದಡಾರ, ರುಬೆಲ್ಲಾ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿಗದಿತ ಯೋಜನೆಗಳು ಮತ್ತು ಕಾರ್ಯಕ್ರಮದಲ್ಲಿ ಉತ್ತಮ ಗುರಿ ಸಾಧಿಸುವ ವಿಚಾರವಾಗಿ ಚರ್ಚಿಸಲಾಯಿತು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲೆಯಲ್ಲಿ ಪರಸ್ಪರ ಇಲಾಖೆಗಳು ಸಮನ್ವಯದಿಂದ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸೂಚಿಸಿದರು.

ಮಳೆಗಾಲದಲ್ಲಿ ಡೆಂಗ್ಯೂ, ಚಿಕುಂಗುನ್ಯ, ಕಾಲರಾ ಸೇರಿದಂತೆ ಜಲಜನ್ಯ ಹಾಗೂ ಕೀಟಜನ್ಯ ಕಾಯಿಲೆಗಳು ಹೆಚ್ಚಿಗೆ ಹರಡುವ ಸಾಧ್ಯತೆ ಇದೆ. ಇದಕ್ಕೆ ಸಾರ್ವಜನಿಕರು ಸೊಳ್ಳೆ ಪರದೆ, ಸೊಳ್ಳೆ ನಿಯಂತ್ರಣ ದ್ರಾವಕ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net