ಕಲುಷಿತ ನೀರು ಸೇವನೆ ಸಾವಿನ ಸಂಖ್ಯೆ 6ಕ್ಕೆ

ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಸಚಿವ ಡಾ.ಜಿ.ಪರಮೇಶ್ವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಡಿಎಚ್​ಒ ಡಾ.ಮಂಜುನಾಥ್​ ಮತ್ತಿತರರು ಇದ್ದರು.
ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಸಚಿವ ಡಾ.ಜಿ.ಪರಮೇಶ್ವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಡಿಎಚ್​ಒ ಡಾ.ಮಂಜುನಾಥ್​ ಮತ್ತಿತರರು ಇದ್ದರು.
Published on

ಚಿನ್ನೇನಹಳ್ಳಿ ಪಿಡಿಒ, ವಾಟರ್​ ಮೆನ್​ ತಲೆದಂಡ ! ಗೃಹ ಸಚಿವ ಪರಮೇಶ್ವರ ಮಾಹಿತಿ

ತುಮಕೂರು/ಮಧುಗಿರಿ: ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬುಧವಾರ 3 ವರ್ಷದ ಹೆಣ್ಣು ಮಗು ಸೇರಿ ಮೂವರು ಮೃತಪಟ್ಟಿದ್ದು, ಪ್ರಕರಣದಲ್ಲಿ ಸಾವಿನ ಸಂಖ್ಯೆ 6ಕ್ಕೇರಿದಂತಾಗಿದೆ. ಪ್ರಕರಣ ಸಂಬಂಧಿಸಿದಂತೆ ಪಿಡಿಒ, ವಾಟರ್​ಮನ್​ ಅಮಾನತುಗೊಳಿಸಲಾಗಿದೆ.
ಜಿಲ್ಲಾ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ, ವಾಂತಿ&ಭೇದಿಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನೇನಹಳ್ಳಿ ಗ್ರಾಪಂ ಗ್ರೇಡ್​ 1 ಕಾರ್ಯದರ್ಶಿ ಮುನಿರಾಜು, ವಾಟರ್​ಮನ್​ ಎಸ್​.ನಾಗರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಕಲುಷಿತ ನೀರು ಸೇವನೆಯಿಂದ 100ಕ್ಕೂ ಹೆಚ್ಚು ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೆಲರು ಖಾಸಗಿ ಆಸ್ಪತ್ರೆ, ಮಧುಗಿರಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಸಾಕಷ್ಟು ಜನರು ಚೇತರಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದರು.
ಪ್ರಕರಣದಲ್ಲಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಕುರಿತು ಸಿಎಂ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲದೇ ಕಲುಷಿತ ನೀರು ಕುಡಿಯುವ ನೀರು ಸರಬರಾಜು ಮಾಡುವ ಪೈಪ್​ಗೆ ಹೇಗೆ ಮಿಶ್ರಣ ಆಯಿತು ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪರಮೇಶ್ವರ ತಿಳಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್​, ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಡಿಎಚ್​ಒ ಡಾ.ಮಂಜುನಾಥ್​, ಡಿಎಸ್​ ಡಾ.ಅಸ್ಕರ್​ ಬೇಗ್​, ಡಾ.ರಾಮೇಗೌಡ ಮತ್ತಿತರರು ಇದ್ದರು.

ಏನಿದು ಪ್ರಕರಣ ?
ಗ್ರಾಮದಲ್ಲಿ ಒಟ್ಟು 265 ಕುಟುಂಬಗಳಿದ್ದು, ಸೋಮವಾರ(ಜೂ.10)ದಿಂದ ಲ್ಮದೇವಿ ಮತ್ತು ಕೆಂಪಮ್ಮದೇವಿಯ 5 ದಿನಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ನಡೆದಿತ್ತು. 30 ವರ್ಷಗಳ ನಂತರ ಜಾತ್ರೆ ಹಮ್ಮಿಕೊಂಡಿದ್ದರಿಂದ ಗ್ರಾಮದಲ್ಲಿ ಸಂಭ್ರಮವೂ ಮನೆಮಾಡಿತ್ತು. ಮೊದಲ ದಿನವಾದ ಸೋಮವಾರ ಇದ್ದಕ್ಕಿದ್ದಂತೆ ಗ್ರಾಮದಲ್ಲಿ ಕೆಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಕೆಲವರು ಸಮೀಪದ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ ಇನ್ನಕೆಲವರು ಮಧುಗಿರಿ ಮತ್ತು ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ದಾಖಲಾದರು. ಮಂಗಳವಾರವೂ ಕೆಲವರಿಗೆ ವಾಂತಿ&ಭೇದಿ ಶುರುವಾಗಿದ್ದು, ಬುಧವಾರ ಬಾಲಕಿ, ಇಬ್ಬರು ವಯೊವೃದ್ಧರು ಮೃತಪಟ್ಟಿದ್ದಾರೆ.

ಸ್ಯಾಂಪಲ್​ ಸಂಗ್ರಹ
ಕಲುಷಿತ ನೀರಿನ ಹಾಗೂ ಅಸ್ವಸ್ಥರಾಗಿರುವವರ ರಕ್ತ ಹಾಗೂ ಇನ್ನಿತರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಕೆಲ ಟೆಸ್ಟ್​ಗಳ ವರದಿ ಬರಬೇಕಿದೆ. ಮೇಲ್ನೋಟಕ್ಕೆ ಕಲುಷಿತ ನೀರು ಕುಡಿದು ಆಗಿರುವ ಘಟನೆ ಎಂಬುದು ಕಂಡುಬರುತ್ತಿದೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

ಇಂದು ಜಿಲ್ಲಾಮಟ್ಟದ ಸಭೆ
ಇಡೀ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೃಕೆ. ಜಲಜೀವನ್​ ಮಿಷನ್​, ಶುದ್ಧ ನೀರಿನ ಟಕಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ. ಈ ಹಿನ್ನೆಲೆ ಶುಕ್ರವಾರ (ಜೂ.14) ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಪರಿಶೀಲನೆ ನಡೆಸುವುದಾಗಿ ಸಚಿವ ಪರಮೇಶ್ವರ ತಿಳಿಸಿದರು. ಸಾರ್ವಜನಿಕರು ಕುಡಿಯುವ ನೀರನ್ನು ಬಳಸುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಕಾಟಾಚಾರಕ್ಕೆ ಓವರ್​ ಹೆಡ್​ ಟ್ಯಾಂಕ್​ ಸ್ವಚ್ಛ?
ಗ್ರಾಮದ ಹೊರವಲಯದಲ್ಲಿನ ಓವರ್​ ಹೆಡ್​ ಟ್ಯಾಂಕ್​ನಿಂದ ಮನೆಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಓವರ್​ ಹೆಡ್​ ಸ್ವಚ್ಛಗೊಳಿ ಒಳಭಾಗದಲ್ಲಿ ಸುಮಾರು ಒಂದೂವರೆ ಅಡಿ ಎತ್ತರದಷ್ಟು ಕಟ್ಟಿದ್ದ ಪಾಚಿಯನ್ನು ಹಾಗೆ ಬಿಟ್ಟಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಟ್ಯಾಂಕ್​ ಒಳಭಾಗವನ್ನು ಸ್ವಚ್ಛಗೊಳಿಸದೆ ನೀರು ತುಂಬಿಸಿ ಮನೆಗಳಿಗೆ ಸರಬರಾಜು ಮಾಡಲಾಗಿದ್ದು, ಇದೇ ನೀರು ಸೇವಿಸಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಟ್ಯಾಂಕ್​ ಅಷ್ಟೇ ಅಲ್ಲದೆ ಗ್ರಾಮದ ಎರಡು ಬೋರ್​ವೆಲ್​ಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದ್ದು, ಬೋರ್​ ನೀರು ಸೇವಿಸಿಯೇ ಗ್ರಾಮಸ್ಥರು ಅಸ್ವಸ್ಥರಾದರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

222 ಜನ ಅಸ್ವಸ್ಥ..?
ಗ್ರಾಮದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಚಿಕಿತ್ಸಾ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದು, ಹಲವರು ಮಧುಗಿರಿ ತುಮಕೂರು, ಹಿಂದೂಪುರ, ಗೌರಿಬಿದನೂರು ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ತೆರಳಿದ್ದಾರೆ. ಮಧುಗಿರಿ ಖಾಸಗಿ ಆಸ್ಪತ್ರೆ ಒಂದರಲ್ಲೆ 40ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರೂ ವಾಂತಿ, ಭೇದಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಗುರುವಾರದವರೆಗೆ ಸ್ಥಳಿಯ ಚಿಕಿತ್ಸಾ ಕೇಂದ್ರದಲ್ಲಿ 122 ರೋಗಿಗಳು ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಇದ್ದು, 100ಕ್ಕೂ ಹೆಚ್ಚು ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಸಾವಿಗೆ ಕಲುಷಿತ ನೀರೇ ಕಾರಣ?
ಮೃತಪಟ್ಟವರ ಪೈಕಿ ಹನುಮಕ್ಕ (86) ವಾರದ ಹಿಂದೆ ಬಿದ್ದು ಗಾಯಗೊಂಡಿದ್ದು, ನಾಗಪ್ಪ (95) ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು ನಾಗಮ್ಮ (95)ವಯಸ್ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಹೊರತು ಕಲುಷಿತ ನೀರು ಸೇವನೆಯಿಂದಲ್ಲ ಎಂದು ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದಾರೆಯಾದರೂ ಬುಧವಾರ ಗ್ರಾಮದ ಚಿಕ್ಕದಾಸಪ್ಪ(74), ಪೆದ್ದಣ್ಣ(72) ಮತ್ತು ಬಾಲಕಿ ಮೀನಾ(3) ಮೃತಪಟ್ಟಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಖಾಸಗಿ ಬೋರ್​ವೆಲ್​ಗಳಿಂದ ನೀರು ಪೂರೈಕೆ
ಗ್ರಾಮದ ಓವರ್​ ಹೆಡ್​ ಟ್ಯಾಂಕ್​ನಿಂದ ಸರಬರಾಜಾಗುತ್ತಿದ್ದ ನೀರಿನ ಜತೆಗೆ ಶುದ್ಧ ಕುಡಿಯುವ ನೀರಿನ ಟಕವನ್ನೂ ಸ್ಥಗಿತಗೊಳಿಸಿದ್ದು, ಕಳೆದರೆಡು ದಿನಗಳಿಂದ ಖಾಸಗಿ ಬೋರ್​ವೆಲ್​ಗಳ ನೀರನ್ನು ಟ್ಯಾಂಕರ್​ಗಳ ಮೂಲಕ ಮನೆಮನೆಗೂ ಸರಬರಾಜು ಮಾಡುಲಾಗುತ್ತಿದೆ. ಆದರೂ ಅಸ್ವಸ್ಥರಾಗುತ್ತಿರುವ ಪ್ರಕರಣ ಹತೋಟಿಗೆ ಬರುತ್ತಿಲ್ಲ. ಗ್ರಾಮದಲ್ಲಿ ನೀರು ಸರಬರಾಜು ಮಾಡುವ ಪೈಪ್​ಗಳಲ್ಲಿ ಚರಂಡಿ ನೀರು ಹರಿಯುತ್ತದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ.

ಊರ ಹೊರಗೆ ಪ್ರಸಾದ, ನೀರು ಸೇವನೆ
ಜಾತ್ರಾ ಮಹೋತ್ಸವ ಸಂಭ್ರಮದಲ್ಲಿದ್ದ ದೇವಸ್ಥಾನದ ಆವರಣ ಭಕ್ತರಿಲ್ಲದೆ ಬಿಕೋ ಎನ್ನುತ್ತಿದ್ದು, ಬಹುತೇಕ ಗ್ರಾಮಸ್ಥರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನ ಅಸ್ವಸ್ಥರಾಗುತ್ತಿರುವುದನ್ನು ಕಂಡು ದೂರದ ಊರುಗಳ ಸಂಬಂಧಿಕರು ಜಾತ್ರೆಗೆ ಬರಲು ಹಿಂದೇಟು ಹಾಕಿದ್ದಾರೆ. ದೇವರ ಒಕ್ಕಲಿನ ಸೀಮಾಂಧ್ರದ ಭಕ್ತರು ದೇವಸ್ಥಾನಕ್ಕೆ ಹೊರಗಿನಿಂದ ಬುತ್ತಿ ತಂದು, ದೇವರ ದರ್ಶನ ಪಡೆದು, ಊರಲ್ಲಿ ನೀರು ಕುಡಿದರೆ ಏನು ಅನಾಹುತವಾಗುತ್ತದೋ ಎಂದು ಹೆದರಿ ಊರಹೊರಗೆ ಪ್ರಸಾದ, ನೀರು ಸೇವಿಸಿ, ಸ್ವಗ್ರಾಮಕ್ಕೆ ತೆರಳುತ್ತಿದ್ದಾರೆ. ಗ್ರಾಮದ ಹೋಟೆಲ್​ ಮತ್ತು ಶಾಲೆಗಳೂ ಬಣಗುಡುತ್ತಿವೆ.

ಡಿಸಿ, ಸಿಇಒ, ಡಿಎಚ್​ಒ ಭೇಟಿ
ಗ್ರಾಮದ ಬಹುತೇಗ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ವಿಪರ್ಯಾಸವೆಂದರೆ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಹಾಕಿದರು ಎಂಬಂತೆ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು, ಅಸ್ವಸ್ಥ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ, ಟನೆಗೆ ಕಾರಣ ತಿಳಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಗುರುವಾರ ಅಧಿಕಾರಿಗಳು ಮತ್ತೇ ಗ್ರಾಮದ ಮನೆಮನೆಗೂ ತೆರಳಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು, ಜಲಜೀವನ್​ ಮಿಷನ್​ ಸಂಪರ್ಕದ ಪ್ರತಿ ಮನೆಗೂ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ, ಎಸ್ಪಿ, ಮತ್ತು ಜಿ.ಪಂ ಸಿಇಒ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಮುನಿಸಿಕೊಂಡಳಾ ದೇವಿ..?
ಜಾತ್ರೆ ನಡೆಸುವುದು ಗ್ರಾಮದ ಹಿತಕ್ಕಾಗಿ. ಆದರೆ ಗ್ರಾಮದಲ್ಲಿ ಜಾತ್ರೆ ಆರಂಭವಾದ ನಂತರ ಇಂತಹ ಟನೆ ನಡೆದಿದ್ದು, ಪ್ರತಿಯೊಬ್ಬರಲ್ಲೂ ಆತಂಕ ಮನೆ ಮಾಡಿದ್ದು, ಜಾತ್ರೆಯ ಆಚರಣೆಯಲ್ಲಿ ಏನಾದರೂ ಯಡವಟ್ಟುಗಳು ಸಂಭವಿಸಿ ಗ್ರಾಮದೇವತೆ ಮುನಿಸಿಕೊಂಡಿರಬಹುದಾ ಎಂಬ ಅನುಮಾನವನ್ನೂ ಗ್ರಾಮದ ಹಿರಿಯರು ವ್ಯಕ್ತಪಡಿಸುತ್ತಾರೆ.

ಮುಗಿಲು ಮುಟ್ಟಿದ ಪಾಲಕರ ಆಕ್ರಂದನ
ಕಲುಷಿತ ನೀರು ಸೇವಿಸಿ ಮೃತಪಟ್ಟ ಬಾಲಕಿ ಮೀನಾ ಪಾಲಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದ್ದ ಒಬ್ಬ ಮಗಳನ್ನು ಕಳೆದುಕೊಂಡ ಮಂಜುನಾಥ್​ ಮತ್ತು ಜಯಲಕ್ಷಿ$್ಮ ದಂಪತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಜಯಲಕ್ಷಿ$್ಮ ಈಗ 7 ತಿಂಗಳು ಗರ್ಭಿಣಿಯಾಗಿದ್ದು, ಮಗಳ ಅಗಲಿಕೆ ಕಂಗಾಲಾಗಿಸಿದೆ. ಬುಧವಾರ ಬೆಳಗ್ಗೆ ಎಲ್ಲರೊಂದಿಗೆ ಆಟವಾಡಿಕೊಂಡಿದ್ದ ಮೀನಾ ಏಕಾಏಕಿ ಅಸ್ವಸ್ಥಳಾಗಿದ್ದಾಳೆ. ವಾಂತಿ, ಭೇದಿ ಹೆಚ್ಚಾಗಿದ್ದು, ತಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಚೇತರಿಸಿಕೊಂಡ ಮಗಳನ್ನು ಪಾಲಕರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಪುನ@ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೀನಾ ಕೊನೆಯುಸಿರೆಳೆದಿದ್ದಾಳೆ.

ಕುಡಿಯುವ ನೀರಿನ ಕೊಳವೆ ಮಾರ್ಗಕ್ಕೆ ಕಲುಷಿತ ನೀರು ಮಿಶ್ರಿತವಾಗಿರುವುದೇ ವಾಂತಿ-&ಭೇದಿ ಪ್ರಕರಣಕ್ಕೆ ಕಾರಣವಾಗಿದೆ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ವಾಂತಿ&ಭೇದಿಯಿಂದ ಅಸ್ವಸ್ಥರಾಗಿರುವ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಚಿಕಿತ್ಸೆ ನೀಡಬೇಕು. ಗ್ರಾಮದಲ್ಲೂ ಹೆಚ್ಚಿನ ವೈದ್ಯಕಿಯ ಸಿಬ್ಬಂದಿ ನಿಯೋಜಿಸಿ 24 ಗಂಟೆ ಆರೋಗ್ಯ ಸೇವೆ ಸಿಗುವಂತೆ ಕ್ರಮವಹಿಸಬೇಕು. ಡಾ.ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ


ಮಳೆಗಾಲದ ಆರಂಭದ ಮೊದಲ ಮಳೆಯ ನಂತರ ಕರುಳ ಬೇನೆಯಂತಹ ರೋಗಗಳು ಸಾಮಾನ್ಯ. ಮಳೆಯ ನೀರು ಟ್ಯಾಂಕರ್​ ಮೂಲಕ ಕುಡಿಯುವ ನೀರಿನಲ್ಲಿ ಸೇರಿದರೆ ಕುಡಿಯುವ ನೀರು ಕಲುಷಿತಗೊಂಡು ವಾಂತಿ&ಬೇಧಿ ಉಂಟಾಗುತ್ತದೆ. ಕಿಲುಬು ಹಿಡಿದ ಪೈಪಿನಲ್ಲಿ ನೀರು ಸರಬರಾಜು ಆದರೂ ಈ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಗ್ರಾಮದಲ್ಲಿ ಜಾತ್ರೆ ಸಂದರ್ಭದಲ್ಲಿ ಕಲುಷಿತ ನೀರು ಸೇವನೆಯಿಂದ ಕರುಳಬೇನೆ ಕಾಣಿಸಿಕೊಂಡು, ಒಬ್ಬರಿಂದ ಮತ್ತೊಬ್ಬರಿಗೆ ಹರಡಿರಬಹುದು. ಟನೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಶ್ರೀದಲ್ಲೆ ತಜ್ಞರ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗುವುದು. ಡಾ.ಶ್ರೀನಿವಾಸ್​, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ


ಚಿನ್ನೇನಹಳ್ಳಿಯಲ್ಲಿ ಒಟ್ಟು 108 ವಾಂತಿ-ಭೇದಿ ಪ್ರಕರಣ ಕಂಡುಬಂದಿದೆ. ಬುಧವಾರ ರಾತ್ರಿ 10 ಹೊಸ ಪ್ರಕರಣಗಳು ದಾಖಲಾಗಿದ್ದು, ಗ್ರಾಮದಲ್ಲಿ ವೈದ್ಯರ ತಂಡ ಬೀಡುಬಿಟ್ಟಿದೆ. ಆರೋಗ್ಯ ಸಿಬ್ಬಂದಿ 24/7 ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆ, ಆರ್​ಒ ಟಕದಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಗ್ರಾಮಕ್ಕೆ ಪ್ರತ್ಯೇಕವಾಗಿ ಟ್ಯಾಂಕರ್​ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ, ನೀರನ್ನು ಕುದಿಸಿ ಆರಿಸಿ ಕುಡಿಯಲು ಗ್ರಾಮಸ್ಥರಲ್ಲಿ ಸಲಹೆ ನೀಡಲಾಗಿದೆ. ಡಾ.ಮಂಜುನಾಥ್​, ಜಿಲ್ಲಾ ಆರೋಗ್ಯಾಧಿಕಾರಿ


ವಾಂತಿ ಭೇದಿಯಿಂದ ಅಸ್ವಸ್ಥರಾದ ಚಿನ್ನೇನಹಳ್ಳಿ ಗ್ರಾಮದ 19 ಮಂದಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 14 ಮಂದಿ ಜನರಲ್​ ವಾರ್ಡಿನಲ್ಲಿದ್ದು, ಗುಣಮುಖರಾಗುತ್ತಿದ್ದಾರೆ. ಐದು ಮಂದಿ ಐಸಿಯುನಲ್ಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವರು ಐಸಿಯು, ಮೂವರು ಮಹಿಳಾ ವಾರ್ಡ್​ ಹಾಗೂ ಇಬ್ಬರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ರಾಮೇಗೌಡ, ಜಿಲ್ಲಾ ಸರ್ವೆಲೆನ್ಸ್​ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net