ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಬಳಸಿಕೊಳ್ಳಲು ಮುಂದಾಗಬೇಕು: ಎ.ನಾರಾಯಣಸ್ವಾಮಿ

4
Published on

ಮೈಸೂರು: ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಬಳಸಿಕೊಳ್ಳಲು ಮುಂದಾಗಬೇಕು. ಇದರಿಂದ ಸಮಯ ಉಳಿತಾಯದ ಜತೆಗೆ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.


ನಗರದ ವಿಜಯನಗರ ಒಂದನೇ ಹಂತದಲ್ಲಿ ಕರ್ಣಾಟಕ ಬ್ಯಾಂಕ್‌ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತೆ ಮಾಡಲು ಶ್ರಮಿಸುತ್ತಿದೆ. ಡಿಜಿಟಲ್ ಇಂಡಿಯಾದಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರುವ ಮೂಲಕ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮಾಡಲು ಒತ್ತು ನೀಡಿದೆ ಎಂದರು.
ಪ್ರತಿ ಐದು ಕಿ.ಮೀ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ಗ್ರಾಹಕರು ಬ್ಯಾಂಕಿನಲ್ಲಿ ಸಮಯ ಕಳೆಯುವ ಬದಲಿಗೆ ಡಿಜಿಟಲ್ ವ್ಯವಹಾರ ಮಾಡಬೇಕು ಎಂದರು.


ಶಾಸಕ ಎಸ್.ಎ.ರಾಮದಾಸ್, ರಸ್ತೆಬದಿ ವ್ಯಾಪಾರಿಗಳು ಇಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದಾರೆ. ನಗರದಲ್ಲಿ ನೊಂದಾಯಿಸಿಕೊಂಡಿರುವ 10,500 ರಸ್ತೆಬದಿ ವ್ಯಾಪಾರಿಗಳಲ್ಲಿ ಕೃಷ್ಣರಾಜ ಕ್ಷೇತ್ರದವರು 3,500 ಮಂದಿ ಇದ್ದಾರೆ. ತರಕಾರಿ ವ್ಯಾಪಾರ ಮಾಡುವವರು ಇಂದು ಆನ್‌ಲೈನ್ ಪೇಮೆಂಟ್ ಪಡೆಯುತ್ತಿದ್ದಾರೆ. ಇದು ಸಾಧ್ಯವಾಗಿದ್ದು ಟಿಜಿಟಲ್ ಬ್ಯಾಂಕಿಂಗ್‌ನಿಂದ ಎಂದರು.


ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ನಗರಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ, ಕರ್ಣಾಟಕ ಬ್ಯಾಂಕ್ ಎಜಿಎಂ ರಮೇಶ್‌ರಾವ್, ಜಿಎಂ ಅನಂತ ಪದ್ಮನಾಭ , ಹಿರಿಯ ಶಾಖಾ ವ್ಯವಸ್ಥಾಪಕ ಅಪ್ಪಚ್ಚು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net