ಗ್ರಾಹಕರಿಗಿರಲಿ ಹಕ್ಕು, ಕರ್ತವ್ಯಗಳ ಅರಿವು

20
Published on

ಮೈಸೂರು: ಗ್ರಾಹಕರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿದ್ದರೆ ವಂಚನೆಯಿಂದ ಪಾರಾಗಬಹುದು ಎಂದು ಸರಸ್ವತಿಪುರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಿ.ಎಂ.ರವೀಂದ್ರ ಹೇಳಿದರು.
ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಸರಸ್ವತಿಪುರಂನ ಟಿಟಿಎಲ್ ಕಾಲೇಜಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಪ್ರತಿ ಗ್ರಾಹಕರ ರಕ್ಷಣೆಯ ಹಿತದೃಷ್ಟಿಯಿಂದ 1984ರಲ್ಲಿ ಗ್ರಾಹಕ ಕಾಯ್ದೆ ರೂಪಿಸಿದೆ. ಗ್ರಾಹಕರು ವಸ್ತು ಮತ್ತು ಸೇವೆಗಳನ್ನು ನೋಂದಾಯಿತ ವ್ಯಕ್ತಿ ಅಥವಾ ಸಂಸ್ಥೆಯಿಂದ ಪಡೆಯಬೇಕು. ಅನ್ಯಾಯ ಕಂಡುಬಂದಲ್ಲಿ ಕಾನೂನಾತ್ಮಕವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಮಹಿಳೆಯರು ಆಭರಣ ಧರಿಸಿ ಓಡಾಡುವಾಗ ಎಚ್ಚರಿಕೆಯಿಂದಿರಬೇಕು. ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸವಾರರು ಹೆಲ್ಮೆಟ್ ಧರಿಸಬೇಕು ಎಂದರು.
ಟಿಟಿಎಲ್ ಟ್ರಸ್ಟ್ ಆಡಳಿತ ಮತ್ತು ನಿಯೋಜನ ಅಧಿಕಾರಿ ಡಾ.ಬಿ.ವಿ.ಪ್ರಶಾಂತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಡಾ.ಜಿ.ವಿ.ರವಿಶಂಕರ್ ಮಾತನಾಡಿದರು.
ಘಟಕದ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಪದವಿ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಭ್ರಮರಾಂಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net