

ಚಿಕ್ಕೋಡಿ: ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಗ್ರಾಹಕರ ಹಿತಾಸಕ್ತಿ ಕಾಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲಿದೆ. ಎಲ್ಲರೂ ಆ ಕಾನೂನು ಅರಿತುಕೊಳ್ಳಬೇಕೆಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹರೀಶ ಪಾಟೀಲ ಹೇಳಿದರು.
ಪಟ್ಟಣದ ಎಸ್.ಬಿ.ಮಗದುಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನ ಪ್ರಯುಕ್ತ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಹಕ್ಕುಗಳ ಕುರಿತು ಹೆಚ್ಚು ಪ್ರಚಾರ ನಡೆಯಬೇಕಿದೆ. ಬೇಗ ಶ್ರೀಮಂತರಾಗಬೇಕೆಂಬ ದುರಾಸೆ ಮೋಸಗಳಿಗೆ ಕಾರಣವಾಗುತ್ತಿದೆ. ತಾವು ಪಡೆಯುವ ವಸ್ತು, ಸೇವೆಗಳ ಗುಣಮಟ್ಟ ಖಚಿತಪಡಿಸಿಕೊಳ್ಳಬೇಕು. ಅಗತ್ಯ ಬಿದ್ದರೆ ಕಾನೂನು ನೆರವು ಪಡೆದು ನ್ಯಾಯ ದೊರಕಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ವಿ.ಬಿ.ಹಳ್ಳೋಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಅವಶ್ಯಕತೆ ಇದೆ ಎಂದು ತಿಳಿಸಿದರು. ವಕೀಲರ ಸಂಘದ ಸಂಘದ ತಾಲೂಕಾಧ್ಯಕ್ಷ ಕಲ್ಮೇಶ ಕಿವಡ ಅವರು ರಾಷ್ಟ್ರೀಯ ಗ್ರಾಹಕ ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಚಿಕ್ಕೋಡಿ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಲ್.ಯರನಾಳೆ, ಕಾರ್ಯದರ್ಶಿ ಎಸ್.ಆರ್.ವಾಲಿ, ತೂಕ ಮತ್ತು ಮಾಪನ ಇಲಾಖೆಯ ಪರಿಶೀಲನಾಧಿಕಾರಿ ಚಂದ್ರಶೇಖರ ಬಸವಪ್ರಭು, ಚಿಕ್ಕೋಡಿಯ ಕಾರ್ಮಿಕ ನಿರೀಕ್ಷಕ ಪ್ರತಾಪ ಇತರರಿದ್ದರು. ಎಂ.ಎಸ್.ಪಾಟೀಲ ಸ್ವಾಗತಿಸಿದರು. ಆರ್.ಕೆ.ಮಾಯನ್ನವರ ನಿರೂಪಿಸಿದರು. ಆರ್.ಎಚ್.ಪಾಟೀಲ ವಂದಿಸಿದರು.