

ಮಡಿಕೇರಿ: ಮೂಲಭೂತ ಹಕ್ಕುಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಜಾಗೃತಿ ಇಲ್ಲದಾಗಿದ್ದು, ಅದರ ಅರಿವಿದ್ದಾಗ ಸಮಸ್ಯೆಗಳಿಗೆ ಪರಿಹಾರ ಸುಲಭಸಾಧ್ಯ ಎಂದು ಬೆಂಗಳೂರಿನ ಗ್ರಾಹಕರ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ವೈ.ಜಿ.ಮುರಳೀಧರನ್ ಹೇಳಿದರು.
ನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿತ ಗ್ರಾಹಕರ ಹಕ್ಕುಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್, ಆಹಾರಪದಾರ್ಥ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅದನ್ನು ಬಳಸುವ ಗ್ರಾಹಕರಿಗೆ ತಮ್ಮ ಮೂಲ ಹಕ್ಕುಗಳ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲದಾಗಿದೆ. ಇದರಿಂದಾಗಿಯೇ ಸಮಸ್ಯೆಗಳು ಪರಿಹಾರ ಕಾಣುವ ಬದಲಿಗೆ ಮತ್ತಷ್ಟು ಹೆಚ್ಚಾಗುತ್ತಿದೆ. ಗ್ರಾಹಕರು ಜಾಗೃತರಾದಾಗ ಮಾತ್ರ ಅನೇಕ ಸಮಸ್ಯೆಗಳು ಸಮಾಜದಲ್ಲಿ ಪರಿಹಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಸಮನ್ವಯ ಇದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಪರಿಸರ ಸಮತೋಲನದೊಂದಿಗೆ ಜಾರಿಯಾದಾಗ ದೇಶದ ಪ್ರಗತಿಯೂ ಸಾಧ್ಯವಾಗಲಿದೆ. ವಿದ್ಯುತ್ ರಂಗದಲ್ಲಿ ನಗರ ಪ್ರದೇಶಗಳ ಪೈಕಿ ಬಿಲ್ ಸಮಸ್ಯೆ ಕಂಡುಬರುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಿಸುತ್ತಿದ್ದೇವೆ. ಗ್ರಾಹಕ ತನಗೆ ಬರುವ ಬಿಲ್ಲನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವುದರಿಂದಾಗಿ ಅನೇಕ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ನಿಯಂತ್ರಣಗಳೇನು, ಗ್ರಾಹಕರಿಗೆ ಇರುವ ಹಕ್ಕುಗಳೇನು ಎಂಬುದನ್ನು ಸ್ಥಳೀಯವಾಗಿ ಸಂಘಸಂಸ್ಥೆಗಳ ಮೂಲಕ ಜನರಿಗೆ ತಿಳಿಸಬೇಕಾದ ಅಗತ್ಯ ಇಂದಿನ ಕಾಲಘಟ್ಟದಲ್ಲಿದೆ ಎಂದೂ ಮುರಳೀಧರನ್ ಹೇಳಿದರು.
ಕೊಡಗು ಜಿಲ್ಲಾ ಚೆಸ್ಕಾಂ ಅಧಿಕಾರಿ ಅನಿತಾಭಾಯಿ ಮಾತನಾಡಿ, ಜಿಲ್ಲೆಯಲ್ಲಿ ೧೩ ವಿದ್ಯುತ್ ಸಬ್ ಸ್ಟೇಷನ್‌ಗಳ ಅಗತ್ಯವಿದೆ. ಆದರೆ, ಕೇವಲ ೨ ಸಬ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿ ಸಬ್ ಸ್ಟೇಷನ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದು ಮಂಜೂರಾಗಿ ಕಾರ್ಯಪ್ರವೃತ್ತವಾದಲ್ಲಿ ಕೊಡಗಿನೆಲ್ಲಡೆ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯವಿದೆ ಎಂದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಪ್ಪನೆರವಂಡ ನಂದಾ ಬೆಳ್ಯಪ್ಪ ಮಾತನಾಡಿ, ಚೆಸ್ಕಾಂ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಸೌಹಾರ್ಧತೆ ಇದ್ದಾಗ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಬೆಳೆಗಾರರನ್ನು ಗಣನೆಗೆ ತೆಗೆದುಕೊಂಡು ವಿಶ್ವಾಸಯುತವಾಗಿ ಕಾರ್ಯನಿರ್ವಹಿಸಿದಾಗ ಚೆಸ್ಕಾಂಗೆ ತೋಟದೊಳಗೆ ಕೂಡ ತಂತಿ ಮಾರ್ಗ ಹಾಕಲು ಸುಲಭಸಾಧ್ಯವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಗೌರವ ಸಲಹೆಗಾರ ಕೆ.ಕೆ.ವಿಶ್ವನಾಥ್, ಅಸೋಸಿಯೇಷನ್ ಉಪಾಧ್ಯಕ್ಷ ಅಜ್ಜೀರಂಡ ಎ.ಚಂಗಪ್ಪ, ಅಸೋಸಿಯೇಷನ್ ಕಾರ್ಯದರ್ಶಿ ಚೊಟ್ಟೇರ ಕೆ.ಬೆಳ್ಯಪ್ಪ ಹಾಜರಿದ್ದರು. ಬೆಳೆಗಾರರು ಸಂವಾದದಲ್ಲಿ ಪಾಲ್ಗೊಂಡು ಅನೇಕ ಮಾಹಿತಿಗಳನ್ನು ಗ್ರಾಹಕರ ಹಕ್ಕುಗಳ ಬಗ್ಗೆ ಪಡೆದರು.