

ಬಂಗಾರಪೇಟೆ: ಅವರೆಕಾಯಿ ಇಳುವರಿ ಕುಸಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಅವರೆಕಾಯಿ ಬೆಲೆ ಗಗನಕ್ಕೇರಿದೆ. ದಿಢಿರ್ ಏರಿಕೆಯಿಂದ ಖರೀದಿದಾರರ ಕೈ ಸುಡುವಂತಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ರೈತರು ಬೆಳೆದ ರಾಗಿ, ನೆಲಗಡಲೆ ಇತ್ಯಾದಿ ಬೆಳೆಗಳ ಇಳುವರಿ ಕುಂಠಿತಗೊಂಡು ರೈತರಿಗೆ ನಷ್ಟ ಉಂಟಾಗಿತ್ತು. ಇದರ ಮಧ್ಯೆ ಅವರೆಕಾಯಿಗೆ ಶುಕ್ರ ದೆಸೆ ಶುರುವಾಗಿದೆ. ಇದೀಗ ಅವರೆಕಾಯಿಯ ಸುಗ್ಗಿ ಆರಂಭಗೊಂಡು ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಬಂಗಾರಪೇಟೆ ತಾಲೂಕಿನ ರೈತರು ಉತ್ತಮ ಇಳುವರಿ ನಿರೀೆಯಲ್ಲಿ 1,469 ಹೆಕ್ಟರ್ ಪ್ರದೇಶದಲ್ಲಿ ಅವರೆ ಬಿತ್ತನೆ ಮಾಡಿದ್ದರು. ಆದರೆ ಮಳೆರಾಯ ಸರಿಯಾದ ಸಮಯಕ್ಕೆ ಕೈಕೊಟ್ಟ ಕಾರಣ ಬಹಳಷ್ಟು ಬೆಳೆಗಳು ನಾಶವಾಗಿದ್ದು, ಕೆಲವು ಕಡೆ ಒಣಗುವ ಹಂತದಲ್ಲಿರುವ ಬೆಳೆಗೆ ಅಕಾಲಿಕ ಮಳೆ ಜೀವ ತುಂಬಿವೆ. ಇನ್ನೂ ಕೆಲ ರೈತರು ಬೆಳೆಗೆ ನೀರಾಯಿಸಿ ಪೋಷಣೆ ಮಾಡಿದ್ದರು, ನಿರೀಕ್ಷೆ ಮಟ್ಟದಲ್ಲಿ ಇಳುವರಿ ಕಾಣಲಿಲ್ಲ. ಇದರ ಮಧ್ಯೆ ಇತ್ತೀಚೆಗೆ ಸುರಿದ ಜಡಿ ಮಳೆಯಿಂದ ಅವರೆ ಬೆಳೆಗೆ ರೋಗಬಾಧೆ ತಗುಲಿ ಇನ್ನಷ್ಟು ಇಳುವರಿ ಕುಂಠಿತಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ನಿರೀತ ಮಟ್ಟದಲ್ಲಿ ಅವರೆ ಪೂರೈಕೆಯಾಗಲಿಲ್ಲ.
ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಅವರೆಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಕಡಿಮೆ ಅವಕ ಕಾರಣ ಬೆಲೆ ಅಧಿಕವಾಗಿದೆ. ಕಳೆದ ವರ್ಷ ಪ್ರತಿ ಕೆಜಿ 30 ರಿಂದ 50 ರೂ.ಗಳ ಮಾರಾಟವಾಗುತ್ತಿದ್ದ ಅವರೆಕಾಯಿ, ಈ ವರ್ಷ 70 ರಿಂದ 80 ರೂ.ಗಳ ವರೆಗೂ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರು ಖರೀದಿಸುವಾಗ ಕೊಂಚ ಯೋಚಿಸುವ ಪರಿಸ್ಥಿತಿ ಎದುರಾಗಿದೆ.
ಕೆಲವು ರೈತರು ಅವರೆಯನ್ನು ಮಾರುಕಟ್ಟೆಗೆ ಹಾಕಿದರೆ ಖರ್ಚು ಹೆಚ್ಚಾಗುತ್ತದೆ ಎಂದು ಭಾವಿಸಿ ತೋಟದಿಂದ ಕಿತ್ತಿ ಅಕ್ಕಪಕ್ಕದ ಮನೆಯವರಿಗೆ ಒಂದೂವರೆ ಕೆಜಿಗೆ 100 ರೂ.ನಂತೆ ಮಾರಾಟ ಮಾಡಲು ಮುಂದಾಗಿದ್ದಾರೆ. ರೈತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ ವಿಧಾನವನ್ನೇ ಅನುಸರಿಸುತ್ತಿದ್ದು, ಖರ್ಚಿಲ್ಲದೆ ಹಣ ಗಳಿಸುವ ಉತ್ತಮ ಮಾರ್ಗ ಕಂಡುಕೊಂಡಿದ್ದಾರೆ. ಈ ಬಾರಿ ಅವರೆ ಉತ್ತಮ ಬೆಲೆ ಹೊಂದಿದ್ದು, ಆರೈಕೆ ಮಾಡಿದ ರೈತರು ಮೂರು ಕಾಸು ನೋಡುವಂತಾಗಿದೆ. ಆದರೆ ಪ್ರತಿ ವರ್ಷ ಅವರೆ ಖರೀದಿಸಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸವಿಯುತ್ತಿದ್ದವರಿಗೆ ಕೈ ಸುಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
"ಅವರೆಯಿಂದ ಪ್ರತಿ ವರ್ಷ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ವರ್ಷಪೂರ್ತಿ ಸವಿಯುತ್ತಿದ್ದೆವು. ಈ ವರ್ಷ ಬೆಲೆ ಅಧಿಕವಾಗಿದ್ದು, ಕೇವಲ ಬೇಳೆ ಸಾರಿಗೆ ಮಾತ್ರ ಸೀಮಿತವಾಗಿದೆ. ಕುರುಕು ತಿಂಡಿ ತಯಾರಿಸಲು ಮುಂದಾಗಿಲ್ಲ."
- ಶಾಂತಮ್ಮ, ಗ್ರಾಹಕಿ ಬಂಗಾರಪೇಟೆ
"ಈ ಬಾರಿ ಸರಿಯಾಗಿ ಮಳೆಯಿಲ್ಲದೆ ಬೆಳೆಗಳು ನಾಶವಾದ ಕಾರಣ ಅವರೆಕಾಯಿ ಸಹ ಇಳುವರಿ ಕಂಡಿಲ್ಲ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆ ಪೂರೈಕೆಯಾಗದೆ ಬೆಲೆ ಗಗನಕ್ಕೇರಿದೆ. ಗ್ರಾಹಕರು ಚೌಕಾಸಿ ಮಾಡಿ ವ್ಯಾಪಾರ ಮಾಡಲು ಮುಂದಾಗಿದ್ದು, 2 ಕೆಜಿ ಖರೀದಿಸುತ್ತಿದ್ದವರು 1 ಕೆಜಿ ಖರೀದಿಸಿ ಹೋಗುತ್ತಿದ್ದಾರೆ."
- ನಾರಾಯಣಪ್ಪ ವ್ಯಾಪಾರಿ ಬಂಗಾರಪೇಟೆ