

ಇಳಕಲ್ಲ: ನಗರದಲ್ಲಿನ ಗ್ರಾನೈಟ್ ಶೋರೂಮ್‌ಗಳು ಒಂದೆಡೆ ಗ್ರಾಹಕರಿಗೆ, ಇನ್ನೊಂದೆಡೆ ಸರ್ಕಾರಕ್ಕೆ ಮೋಸ ಮಾಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಿದವು.
ಇಳಕಲ್ಲ ತಾಲೂಕು ಕರವೇ ಅಧ್ಯಕ್ಷ ಮಹಾಂತೇಶ ವಂಕಲಕುಂಟಿ ನೇತೃತ್ವ ವಹಿಸಿ ಮಾತನಾಡಿ, ಗ್ರಾನೈಟ್ ಶೋರೂಮ್‌ಗಳ ಶೋಷಣೆ ನಿಲ್ಲಬೇಕು. ಗ್ರಾನೈಟ್ ಒಯ್ಯಲು ಬರುವ ಗ್ರಾಹಕರಿಗೆ ಯೋಗ್ಯ ದರದಲ್ಲಿ ಸರಕು ಸಿಗಬೇಕು. ತಾಲೂಕು ಆಡಳಿತವೂ ಕರವೇ ಜತೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಧರಣಿ ಮುಂದುವರಿಸಲಾಗುವುದೆಂದು ತಿಳಿಸಿದರು.
ರೋಹಿತ ಬಾರಕೇರ, ಅಶೋಕ ಪೂಜಾರಿ, ಸಲೀಮ್ ಜರದಾರಿ, ಜಹೀರ್ ಸಂಗಮಕರ, ಶೋಭಾ ಆರೇರ, ಶ್ರೀನಿವಾಸ ಮಾರಾ, ಮಂಜುಳಾ ಅಂಗಡಿ, ರಿಯಾಜ್ ವಾಲೀಕಾರ, ಪ್ರವೀಣ ವಾಲಿಕಾರ, ದಶರಥ ವಡ್ಡರ, ಶಬಾನಾ ಲಿಂಗಸಗೂರು, ಕಸ್ತೂರಿ ಮೇರವಾಡೆ , ಮಹಾಂತಮ್ಮ ಪಾಗಾದ ಇತರರಿದ್ದರು.
ಚೆಕ್ ಪೋಸ್ಟ್ ನಿರ್ಮಿಸಿ: ಈ ಎಲ್ಲ ಶೋರೂಮ್‌ಗಳಿಗೆ ಬರುವ ಗ್ರಾನೈಟ್ ಸ್ಲಾಬ್‌ಗಳ ತಪಾಸಣೆ ಮಾಡಲು ನಗರದ ನಾಲ್ಕು ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕೆಂದು ಒತ್ತಾಯಿಸಿದರು.