ಮೊಬೈಲ್ ಸೇವಾ ನೂನ್ಯತೆಗಾಗಿ ಹಣ ವಾಪಸ್‌ಗೆ ಆದೇಶ; ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

Published on

ಹಾವೇರಿ: ಆನ್‌ಲೈನ್ ಮೂಲಕ ಖರೀದಿಸಿದ್ದ ಮೊಬೈಲ್‌ನ ಸೇವಾ ನ್ಯೂನ್ಯತೆಗಾಗಿ ಗ್ರಾಹಕನಿಗೆ ಮೊಬೈಲ್ ಖರೀದಿ ಮೊತ್ತವನ್ನು ಬಡ್ಡಿಸಮೇತ ಪಾವತಿಸುವಂತೆ ಆ್ಯಪಲ್ ಇಂಡಿಯಾ ಪ್ರೈ ಲಿ., ಗ್ರೀನ್ ಮೊಬೈಲ್ಸ್ ಹಾಗೂ ಎಫ್-1 ಇನ್ಫೋಸೊಲೆಸನ್ ಮತ್ತು ಸರ್ವಿ ಪ್ರೈ ಲಿ.ಗೆ ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ. ಹಾವೇರಿ ನಗರದ ನಿವಾಸಿ ಉಮೇಶ ಮಲ್ಲಿಕಾರ್ಜುನ ಸಾತೇನಹಳ್ಳಿ ಎಂಬುವರು ಆನ್‌ಲೈನ್ ಮೂಲಕ ಮೊಬೈಲ್ ಖರೀದಿಸಲು ಮುಂದಾಗಿದ್ದರು. ತಾವು ಖರೀದಿಸಲು ಉದ್ದೇಶಿಸಿದ್ದ ಮೊಬೈಲ್ ಬಗ್ಗೆ ಮಹಾರಾಷ್ಟ್ರ ರಾಜ್ಯದ ಠಾಣೆ ಜಿಲ್ಲೆಯ ವಾಶ್ರೀ ಗ್ರಾಮದ ಗ್ರೀನ್ ಮೊಬೈಲ್ಸ್ ಕಚೇರಿ ವ್ಯವಸ್ಥಾಪಕರಿಂದ ಫೋನ್ ಬಗ್ಗೆ ಮಾಹಿತಿ ಪಡೆದಿದ್ದರು. ಸದರಿಯವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ಅಕ್ಟೋಬರ್ 28, 2021ರಂದು 32,990 ರೂ.ಗೆ ಅಮೇಜಾನ್ ಕಂಪನಿ ಮೂಲಕ ಆ್ಯಪಲ್ ಐಫೋನ್ ಎಕ್ಸ್‌ಆರ್ 8517 ಮಾದರಿ ಮೊಬೈಲ್ ಖರೀದಿಸಿದ್ದರು. ಮೊಬೈಲ್ ಬಳಕೆ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆ, ಅಟೋಮೆಟಿಕ್ ಕಾಲ್ ಕಟ್, ಕಾಲ್ ಆನ್- ಆಫ್, ಸ್ಪೀಕರ್ ಸಮಸ್ಯೆ ಹಾಗೂ ಡಿಸ್‌ಪ್ಲೇ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳು ಉಂಟಾದ ಹಿನ್ನೆಲೆಯಲ್ಲಿ ರಿಪೇರಿಗಾಗಿ ಮೊಬೈಲ್‌ಅನ್ನು ನಾಲ್ಕು ಬಾರಿ ಎಫ್-1 ಇನ್ಫೋಸೊಲೆಸನ್ ಮತ್ತು ಸರ್ವಿ ಪ್ರೈ ಲಿ. ಹುಬ್ಬಳ್ಳಿ ಶಾಖೆಗೆ ನೀಡಿದರೂ ಫೋನ್ ಸರಿಯಾಗಿ ಕಾರ್ಯನಿರ್ವಹಿದೆ ಬಂದ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಬದಲಾಯಿಸಿಕೊಡಲು ಕೋರಿದಾಗ ಫೋನ್ ಬದಲಾಯಿಸದ ಕಾರಣ ಆ್ಯಪಲ್ ಇಂಡಿಯಾ ಪ್ರೈ ಲಿ., ಗ್ರೀನ್ ಮೊಬೈಲ್ಸ್ ಹಾಗೂ ಎಫ್-1 ಇನ್ಫೋಸೊಲೆಸನ್ ಮತ್ತು ಸರ್ವಿ ಪ್ರೈ ಲಿ. ವ್ಯವಸ್ಥಾಪಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯೆ ಉಮಾದೇವಿ ಹಿರೇಮಠ ಅವರು ವಿಚಾರಣೆ ನಡೆಸಿ, ಗ್ರಾಹಕರು ಮೊಬೈಲ್ ಖರೀದಿಗೆ ನೀಡಿದ 32,999 ರೂ.ಅನ್ನು ಶೇ.6ರ ಬಡ್ಡಿಯೊಂದಿಗೆ ಜಂಟಿಯಾಗಿ ಪಾವತಿಸಬೇಕು. ಮಾನಸಿಕ ಮತ್ತು ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಹಾಗೂ ಪ್ರಕರಣಕ್ಕಾಗಿ ಮಾಡಿದ ಖರ್ಚಿನ ಬಾಬ್ತು ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸಲು ಆದೇಶ ನೀಡಿದ್ದಾರೆ. ಪರಿಹಾರ ಪಾವತಿ ವಿಳಂಬವಾದಲ್ಲಿ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net