

ಬೆಳಗಾವಿ: ಗ್ರಾಹಕರು ಯಾವುದೇ ವಸ್ತು ಖರೀದಿ ಮಾಡುವಾಗ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಅದರ ಸೀಮಿತ ಅವಧಿಯನ್ನು ಪರಿಶೀಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ( ಡಿ.ಸಿ.ಐ.ಸಿ) ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ ಹಾಗೂ ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಮಾ.15) ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಅದೇ ರೀತಿ ಎಲ್ಲ ಮಕ್ಕಳಿಗೆ ಗ್ರಾಹಕ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡಬೇಕು.
ಗ್ರಾಹಕರ ಹಿತಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸಬೇಕು. ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಅಥವಾ ಪಡೆದ ಸೇವೆಗಳಿಗಾಗಿ ತಪ್ಪದೇ ರಸೀದಿ ಪಡೆದುಕೊಳ್ಳಬೇಕು ಎಂದು ಶಾಂತಲಾ ಅವರು ಹೇಳಿದರು.
ಸಮಾಜದಲ್ಲಿರುವ ಬಡವರು, ಶ್ರೀಮಂತರಿಗೆ ಆಸ್ಪತ್ರೆ ಕೋರ್ಟ್ ಪೊಲೀಸ್ ಸೇರಿದಂತೆ ಅನೇಕ ಸಮಸ್ಯೆಗಳಿರುತ್ತವೆ. ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಾರೆ. ಅದೇ ರೀತಿಯಲ್ಲಿ ವಕೀಲರು ಶ್ರೀಮಂತರ ಪರವಾಗಿ ವಾದ ಮಾಡಿದರೆ ಬಡವರ ಪರವಾಗಿ ಸರ್ಕಾರಿ ವಕೀಲರು ಸರಿಸಮನಾಗಿ ವಾದವನ್ನು ಮಂಡಿಸಲು ನಿಯೋಜನೆ ಮಾಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳೀಮೋಹನ್ ರೆಡ್ಡಿ ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನ್ಯಾಯವಾದಿ ಅಶೋಕ ಹಲಗಲಿ ಅವರು, ಪ್ರಕೃತಿ ಮೇಲಿನ ದುಷ್ಪರಿಣಾಮದಿಂದ ನಮ್ಮ ಆರೋಗ್ಯ ಹಾನಿಯಾಗುತ್ತಿದೆ. ಸರಿಯಾದ ರೀತಿಯಲ್ಲಿ ನೀರು, ಗಾಳಿ ದೊರಕುತ್ತಿಲ್ಲ. ಆದಕಾರಣ 2019ರಲ್ಲಿ ಸರ್ಕಾರವು ಎಲೆಕ್ಟ್ರಿಕಲ್ ಬೈಕ್ ಹಾಗೂ ಕಾರ್ ಚಾಲ್ತಿಯಲ್ಲಿ ತಂದಿದ್ದು, ಜನರು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಗ್ರಾಹಕರು ಯಾವುದೇ ವಸ್ತುವಿನಲ್ಲಿ ಖರೀದಿಯಲ್ಲಿ ಮೋಸ ಹೋದಲ್ಲಿ ಕಾನೂನಿನ ಮೊರೆ ಹೋಗಬಹುದು. ಕಾನೂನಿನ ಪ್ರಕಾರ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದು ಅಶೋಕ ಹಲಗಲಿ ಅವರು ಹೇಳಿದರು.
ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವ ಮುಂಚೆ ಗುಣಮಟ್ಟದ್ದು ಎಂಬುದನ್ನು ತಿಳಿದುಕೊಳ್ಳಬೇಕು, ಎಲ್ಲರೂ ಗ್ರಾಹಕ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಯಾವುದೇ ವಸ್ತು ಖರೀದಿಸುವಾಗ ತಪ್ಪು ಕಂಡು ಬಂದಲ್ಲಿ ಕಾನೂನಿನ ಮರೆ ಹೋಗಬಹುದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ರಾಚಪ್ಪ ತಾಳಿಕೋಟಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ಜಿಲ್ಲಾ ಗ್ರಾಹಕರ ಆಯೋಗದ ಹೆಚ್ಚುವರಿ ಅಧ್ಯಕ್ಷ ರಾದ ಸಂಜೀವ್ ವಿ.ಕುಲಕರ್ಣಿ, ಗ್ರಾಹಕರ ಆಯೋಗದ ಸದಸ್ಯರಾದ ಸುನಂದಾ ಎನ್. ಕಾದ್ರೊಳ್ಳಿಮಠ, ಜಿಲ್ಲಾ ಗ್ರಾಹಕ ಮಹಿಳಾ ಸದಸ್ಯರಾದ ನಯನಾ ಎಂ. ಕಾಮಟೆ, ಡೆಪ್ಯುಟಿ ಕಂಟ್ರೋಲರ್ ಸದಾಶಿವ್ ಮಾಳಿ ಮತ್ತಿತರರು ಉಪಸ್ಥಿತರಿದ್ದರು.
***