ಟೂರಿಸ್ಟ್ ವೀಸಾ ಶುಲ್ಕ ವಾಪಸ್ ಕೊಡದ ಏಜೆನ್ಸಿಗೆ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

visa
Published on

ಬೆಂಗಳೂರು: ವಿದೇಶ ಪ್ರವಾಸಕ್ಕೆ ಹೋಗ ಬಯಸುವವರು ಆ ದೇಶದ ವೀಸಾಕ್ಕಾಗಿ ಅರ್ಜಿ ಸಲ್ಲಿಸುವುದು ಸಾಮಾನ್ಯ. ತಾಂತ್ರಿಕ ಕಾರಣಕ್ಕೆ ಅರ್ಜಿ ತಿರಸ್ಕಾರವಾದಾಗ ವೀಸಾಗಾಗಿ ಕಟ್ಟಿದ ಶುಲ್ಕವನ್ನು ಹಿಂದಿರುಗಿಸಬೇಕು ಎಂದು ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ವೀಸಾ ಫೆಸಿಲಿಟೇಷನ್ ಸರ್ವೀಸಸ್ (ವಿಎಫ್​ಸ್) ಗ್ಲೋಬಲ್ ಸಂಸ್ಥೆ ಮೂಲಕ ಬೆಂಗಳೂರಿನ ರಂಗಸಂಸ್ಕೃತಿ ತಂಡದ 14 ಸದಸ್ಯರು ಸೌದಿ ಅರೇಬಿಯಾದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವೀಸಾ ಮಂಜೂರಿಯಲ್ಲಿ ವಿಳಂಬವಾಗಿದ್ದಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸೌದಿ ಕಾನ್ಸುಲೇಟ್‌ಗೆ ವಿಶೇಷ ಶಿಾರಸ್ಸು ಪತ್ರವನ್ನು ನೀಡಿದರೂ ಪ್ರಯೋಜನವಾಗಿರಲಿಲ್ಲ. ಸಕಾರಣವಿಲ್ಲದೆ ಸೌದಿ ಕಾನ್ಸುಲೇಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬಗ್ಗೆ ಅರ್ಜಿದಾರರು ವಿಚಾರಿಸಲು ಹೋದಾಗ ಕಚೇರಿಯ ಒಳಗೂ ಬಿಟ್ಟುಕೊಳ್ಳದೇ, ಸಮಂಜಸ ಉತ್ತರವನ್ನೂ ನೀಡಿದೆ ಹಿರಿಯ ನಾಗರೀಕರನೇಕರಿಗೆ ಮಾನಸಿಕವಾಗಿ ಹಿಂಸೆಯಾಗುವಂತೆ ನಡೆದುಕೊಂಡಿದ್ದರು. ಅಂತಿಮವಾಗಿ ಎಲ್ಲ 14ಜನರು ವಕೀಲರಾದ ಯು.ಟಿ.ಪ್ರಶಾಂತ ಅವರ ಮೂಲಕ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನೋಟಿಸ್ ಜಾರಿ ಮಾಡಿದರೂ ವಿಎಫ್​ಸ್ ನ ಯಾವುದೇ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಂತಿಮಾವಾಗಿ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಹಣ ಹಿಂದಿರುಗಿಸುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ ?

ಸೌದಿ ಅರೇಬಿಯಾಕ್ಕೆ ಹೋಗಲು ವಿಎಫ್​ಸ್ ಮೂಲಕ ವೀಸಾ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಮೆ ಹೆಸರಲ್ಲಿ ಒಬ್ಬೊರಿಗೆ ಒಂದೊಂದು ರೀತಿಯಲ್ಲಿ ಹಣ ಸಂಗ್ರಹ ಮಾಡಲಾಗಿತ್ತು. ಕೆಲವರಿಗೆ 30 ಸಾವಿರದವರೆಗೆ ವೀಸಾ ಶುಲ್ಕವನ್ನು ವಿಧಿಸಿದ್ದರು. ಈ ಹಂತದಲ್ಲಿ ವಿಎಫ್​ಸ್ ನಡೆದುಕೊಂಡ ರೀತಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತಿಂಗಳುಗಟ್ಟಲೆ ಕಳೆದರೂ ಅರ್ಜಿಯನ್ನು ವಿಲೇವಾರಿ ಮಾಡದೆ ವಿಳಂಬ ನೀತಿಯನ್ನು ಅನುಸರಿಸಿದ ಪರಿಣಾಮ ಕಾರ್ಯಕ್ರಮದ ದಿನಾಂಕ ಹತ್ತಿರ ಬಂದಾಗ ಅರ್ಜಿ ತಿರಸ್ಕೃತಗೊಂಡಿದೆ ಎಂದು ತಿಳಿಸಿದ್ದಾರೆ. ಆ ನಂತರ ತಿಂಗಳುಗಟ್ಟಲೆ ಹತ್ತಾರು ಬಾರಿ ವಿಎ್ಎಸ್ ಕೇಚರಿಗೆ ಅಲೆದಾಡಿದರೂ ಹಣ ಹಿಂದಿರುಗಿಸಿರಲಿಲ್ಲ. ಕೊನೆಗೆ ಕೆಲವರಿಗೆ ಶೇ.50ಕ್ಕಿಂತ ಕಡಿಮೆ, ಕೆಲವರಿಗೆ ಶೇ.25ಕ್ಕಿಂತ ಕಡಿಮೆ ಹಣವನ್ನು ಹಿಂದಿರುಗಿಸಿ, ವಿಮೆಗಾಗಿ ಕಟ್ಟಿದ ಹಣ ಮರಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು.

ನ್ಯಾಯಾಲಯದ ಆದೇಶದ ವಿವರ

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ದೂರುದಾರರ ವಿನಂತಿಯನ್ನು ಭಾಗಶಃ ಪುರಸ್ಕರಿಸಿದೆ. ಅರ್ಜಿದಾರರು ಪಾವತಿಸಿದ ಮೊತ್ತಕ್ಕೆ ಅನುಗುಣವಾಗಿ ಹಣವನ್ನು ಹಿಂದಿರುಗಿಸಲು ಆದೇಶಿಸಿದೆ. ಹಾಗೂ ಪ್ರತಿಯೊಬ್ಬ ಅರ್ಜಿದಾರರಿಗೂ ಮಾನಸಿಕ ಹಿಂಸೆಗಾಗಿ 3 ಸಾವಿರ ರೂ. ಮತ್ತು ಪೂರ್ವಾನ್ವಯವಾಗುವಂತೆ ವಾರ್ಷಿಕ ಶೇ.9 ಬಡ್ಡಿಯನ್ನು ಮತ್ತು ಮೊಕದ್ದಮೆಯ ವೆಚ್ಚವಾಗಿ 10 ಸಾವಿರ ರೂಪಾಯಿ ಮರುಪಾವತಿಸಲು ಸೂಚಿಸಿದೆ. 45 ದಿನಗಳೊಳಗಾಗಿ ಆದೇಶ ಪಾಲಿಸದಿದ್ದಲ್ಲಿ, ಆದೇಶವಾದ ದಿನಾಂಕದಿಂದ ಜಾರಿಗೆ ಬರುವಂತೆ ಶೇ.9ರ ಬಡ್ಡಿದರದೊಂದಿಗೆ 28 ಸಾವಿರ ಪಾವತಿಸಬೇಕೆಂದು ನ್ಯಾಯಾಲಯ ಎಚ್ಚರಿಸಿದೆ.

ವೀಸಾ ಹೆಸರಲ್ಲಿ ಹಲವರಿಗೆ ವಂಚನೆ ?

ಪ್ರತಿಯೊಬ್ಬರಿಗೂ ವಿದೇಶ ಪ್ರವಾಸ ಮಾಡಬೇಕೆಂಬ ಆಸೆ ಇರುತ್ತದೆ. ಹಾಗಂತ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಆ ದೇಶ ವೀಸಾ ನೀಡಬೇಕಂತಿಲ್ಲ. ಅಗತ್ಯ ದಾಖಲೆಗಳ ಕೊರತೆಯಿಂದ ಅರ್ಜಿ ತಿರಸ್ಕೃತವಾಗಬಹುದು. ಹಾಗೆ ಅರ್ಜಿ ತಿರಸ್ಕೃತವಾದಾಗ ಪ್ರೊಸೆಸ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ಹಿಂದಿರುಗಿಸಬೇಕು. ಆದರೆ ವಿಎಫ್​ಸ್ ಶೇ.75ರಷ್ಟು ಹಣವನ್ನು ಹಿಂದಿರುಗಿಸದೇ ಹಲವರಿಗೆ ವಂಚನೆ ಮಾಡಿದೆ ಎಂದು ಅರ್ಜಿದಾರರು ದೂರಿದ್ದಾರೆ. ಸೌದಿ ಅರೇಬಿಯಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಸಂಸ್ಕೃತಿ ಸಮ್ಮೇಳನಕ್ಕಾಗಿ 60ಕ್ಕೂ ಹೆಚ್ಚು ಜನ (ಹೆಚ್ಚಿನವರು ಕಲಾವಿದರು) ವೀಸಾಗಾಗಿ ಅರ್ಜಿ ಸಲ್ಲಿಸಿದ್ದು ಆ ಎಲ್ಲರಿಗೂ ಕೂಡಾ ವೀಸಾ ತಿರಸ್ಕರಿಸಿರುವುದು ದೊಡ್ಡ ಪ್ರಶ್ನೆ. ಅವರಲ್ಲಿ ಹಲವರು ಹಿರಿಯ ನಾಗರೀಕರಿದ್ದು, ನ್ಯಾಯಾಲಯಕ್ಕೆ ಹೋಗುವುದಕ್ಕೆ ಸಾಧ್ಯವಾಗದೆ ಕೇವಲ 14 ಜನರ ತಂಡ ಮಾತ್ರ ಕೇಸು ದಾಖಲಿಸಿತ್ತು. "69 ರಾಷ್ಟ್ರಗಳ ವೀಸಾ ಸೇವೆಯನ್ನು ನೀಡುವ ವಿಎಫ್​ಸ್ ಸಂಸ್ಥೆಯು ಕೋಟ್ಯಾಂತರ ಜನರಿಗೆ ವೀಸಾ ನೀಡಿದ ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಸಂಸ್ಥೆಯ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೀಸಾ ಪ್ರಕ್ರಿಯೆಗೆ ತಿಂಗಳುಗಟ್ಟಲೆ ವಿಳಂಬ ಮಾಡಿದ್ದು, ಅರ್ಜಿ ತಿರಸ್ಕೃತವಾದ ನಂತರ ಹಣ ಹಿಂದಿರುಗಿಸಲು ಹಿರಿಯರನ್ನು ಹತ್ತಾರು ಬಾರಿ ಅಲೆದಾಡಿಸಿ ಕೇವಲ ಶೇ.25ರಷ್ಟು ಹಣ ನೀಡಿದ್ದಾರೆ. ಇದನ್ನೆಲ್ಲ ಗಮನಿಸಿ ನ್ಯಾಯಾಲಯದಲ್ಲಿ ತೀರ್ಪು ನೀಡಿದೆ. " -ಎಂ.ಲೋಕೇಶ್ ಅರ್ಜಿದಾರರು

"ವೀಸಾವನ್ನೇ ನೀಡದಿದ್ದ ಮೇಲೆ ವಿಮೆ ಮಾಡಿಸುವ ಅವಶ್ಯಕತೆ ಏನಿದೆ ? ಸಂಗ್ರಹ ಮಾಡಿದ ಶುಲ್ಕದ ಹಣಕ್ಕೆ ತಾವು ಜವಾಬ್ದಾರರಲ್ಲ ಎಂದು ವಿಎಫ್​ಸ್ ಹೇಳಿದ್ದು, ಅವರು ನೀಡಿರುವ ರಶೀದಿಗಳಲ್ಲಿರುವ ವಿಮಾ ಕಂಪನಿಯೇ ಅಸ್ತಿತ್ವದಲ್ಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನೋಟಿಸ್ ಸ್ವೀಕಾರ ಮಾಡಿಲ್ಲ, ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಇದೆಲ್ಲವನ್ನು ನೋಡಿದರೆ ಇದರ ಹಿಂದೆ ವಂಚನೆಯ ವಾಸನೆ ಬರುತ್ತಿದೆ."  -ಯು.ಟಿ.ಪ್ರಶಾಂತ, ವಕೀಲರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net