

ಉಡುಪಿ: ಎರಡು ದಶಕಗಳ ಹಿಂದೆ ಉದ್ಯೋಗದಾತರು ಸಲ್ಲಿಸಿದ್ದ ಜಂಟಿ ಡಿಕ್ಲರೇಶನ್ ದಾಖಲೆ ತಮ್ಮ ಕಡತದಲ್ಲಿ ಕಾಣೆಯಾಗಿದೆ ಎಂಬ ಕಾರಣಕ್ಕಾಗಿ ಪಿಂಚಣಿದಾರರನ್ನೇ ಹೊಣೆಯಾಗಿರಿಸಿ ಎರಡು ವರ್ಷದಿಂದ ಪಿಂಚಣಿ ತಡೆ ಹಿಡಿದ ಪ್ರಾವಿಡೆಂಟ್ ಫಂಡ್ ಸಂಸ್ಥೆ ಪಿಂಚಣಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಜಿಲ್ಲಾ ಬಳಕೆದಾರರ ನ್ಯಾಯಾಲಯದ ಐತಿಹಾಸಿಕ ತೀರ್ಪು ತೀರ್ಪು ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ ಶ್ಯಾನುಭೋಗ್ ಅವರು, ಹೆಜಮಾಡಿ ನಿವಾಸಿ 68 ವರ್ಷ ಪ್ರಾಯದ ಗೀತಾ ಕಾಂಚನ್ ಸುಮಾರು 17 ವರ್ಷ ಮಹಾಲಕ್ಷ್ಮೀ ಬ್ಯಾಂಕಿನ ಹೆಜಮಾಡಿ ಶಾಖೆಯಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸಿ, 2014ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ಮರು ತಿಂಗಳಿನಿಂದ 1756 ರೂ. ಸಿಗುತ್ತಿತ್ತು. ಸುಮಾರು 6 ವರ್ಷಗಳ ಅನಂತರ ಉಡುಪಿ ಪ್ರಾವಿಡೆಂಟ್ ಫಂಡ್ ರೀಜನಲ್ ಕಚೇರಿಯಿಂದ ಆಕೆಗೆ ಬಂದ ಪತ್ರದಲ್ಲಿ 2020ರ ಮೇ ತಿಂಗಳಿನಿಂದ ಮಾಸಿಕ ಪಿಂಚಣಿಯಲ್ಲಿ 500 ರೂ. ಕಡಿತಗೊಳಿಸಲಾಗಿದೆ ಎಂಬ ಸೂಚನೆ ನೀಡಲಾಗಿತ್ತು. ಈ ಕಡಿತಕ್ಕೆ ಕಾರಣ ಕೇಳಲು ಪಿ.ಎಫ್ ಕಚೇರಿಗೆ ತೆರಳಿದ ಗೀತಾ ಅವರಿಗೆ, ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳೂ 500 ಗಳಷ್ಟು ಅಧಿಕ ಪಿಂಚಣಿ ಹಣ ಪಾವತಿಸಿರುವುದರಿಂದ ಈಗಾಗಲೇ ಪಾವತಿಸಿರುವ ಅಧಿಕ ಹಣ 50,147 ರೂ. ಏಕಗಂಟಿನಲ್ಲಿ ಡಿಮಾಂಡ್ ಡ್ರಾಫ್ಟ್ ಮೂಲಕ ಹಿಂದಿರುಗಿಸಲು ಅಧಿಕಾರಿಗಳು ಸೂಚನೆ ನೀಡಿದರು. ಜಂಟಿ ಡಿಕ್ಲರೇಶನ್ ಎಂಬ ದಾಖಲೆ ಕಡತದಲ್ಲಿಲ್ಲ. ಆಡಿಟ್ ಪಾರ್ಟಿ ಬಂದು ನಿರಾಕರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. 2021 ಜನವರಿಯಲ್ಲಿ ಕೂಡಲೇ ಬಾಕಿ ಮೊತ್ತ ಹಿಂತಿರುಗಿಸದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪತ್ರ ಬರೆಯಲಾಗಿತ್ತು. ಇದನ್ನು ನೋಡಿ ಕಂಗಾಲಾದ ಗೀತಾ ಅವರು ಮಾನವ ಹಕ್ಕು ಪ್ರತಿಷ್ಠಾನವನ್ನು ಸಂಪರ್ಕಿಸಿದ್ದರು. ಈ ಇಡೀ ಪ್ರಕರಣದಲ್ಲಿ ಗೀತಾ ಕಾಂಚನ್ ಮಾಡಿರುವ ತಪ್ಪೇನು ಎಂಬ ಪ್ರತಿಷ್ಠಾನದ ಪ್ರಶ್ನೆಗೆ ಯಾವ ಅಧಿಕಾರಿಯೂ ಉತ್ತರ ನೀಡಿಲ್ಲ. ಹೀಗಾಗಿ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಯಿತು ಎಂದು ಮಾಹಿತಿ ನೀಡಿದರು.
ಐತಿಹಾಸಿಕ ತೀರ್ಪು
ಸುಮಾರು ಒಂಬತ್ತು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ನೀಡಿದ ತೀರ್ಪಿನಲ್ಲಿ ಈ ಕೂಡಲೇ ಗೀತಾ ಕಾಂಚನ್‌ರಿಗೆ 1756 ರೂ.ಗಳ ಮಾಸಿಕ ಪಿಂಚಣಿಯನ್ನು ನೀಡಬೇಕು ಎಂದು ಪಾವಿಡೆಂಟ್ ಫಂಡ್ ಸಂಸ್ಥೆಗೆ ಆದೇಶಿಸಿದೆ. ಜೊತೆಗೆ ಕಳೆದೆರಡು ವರ್ಷಗಳಿಂದ ಕಡಿತಗೊಳಿಸಿದ್ದ 500 ರೂ. ಮಾಸಿಕ ಪಿಂಚಣಿ ಬಾಕಿಯನ್ನು ಆಕೆಗೆ ಪಾವತಿಸಬೇಕು. ಹೆಚ್ಚಾಗಿ ಪಾವತಿಸಿದೆ ಎನ್ನಲಾದ 50,147 ರೂ.ಗಳನ್ನು ಆಕೆಯಿಂದ ವಸೂಲಿ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಗೀತಾ ಕಾಂಚನ್‌ರಿಗೆ ಪರಿಹಾರವಾಗಿ 25,000 ರೂ. ಹಾಗೂ ದಾವೆಗಾಗಿ ವ್ಯಯಿಸಿದ 10,000 ರೂ. ಒಂದು ತಿಂಗಳೊಳಗಾಗಿ ನೀಡಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.