ಅಧಿಕಾರಿಗಳ ಸೇವಾ ನ್ಯೂನತೆ; ಪಿಪಿಎಫ್ ಖಾತೆದಾರರಿಗೆ ಸಂಕಷ್ಟ

udp-10-shanbhog
Published on

ಉಡುಪಿ: ಪಬ್ಲಿಕ್​ ಪ್ರಾವಿಡೆಂಟ್​ ಫಂಡ್​ (ಎಚ್​ ಯು ಎಫ್​) ಖಾತೆ ತೆರೆಯುವ ಸೌಲಭ್ಯ 2005ರಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಈಗಾಗಲೇ ತೆರೆದ ಕುಟುಂಬ ಖಾತೆಗಳನ್ನು 15ವರ್ಷದ ಅವಧಿ ಮುಗಿದ ತಕ್ಷಣವೇ ಮುಕ್ತಾಯಗೊಳಿಸಬೇಕು ಎಂಬುದಾಗಿ ನಿರ್ದೇಶಿಸಿದೆ. ಆದರೆ ಅಂಚೆಕಚೇರಿಗಳಲ್ಲಿ ಖಾತೆದಾರರಿಗೆ ಈ ಬಗ್ಗೆ ಮಾಹಿತಿ ನೀಡದೆ ಖಾತೆಯನ್ನು ಮುಂದುವರಿಸಲಾಗಿದೆ. ಪ್ರಸ್ತುತ ಖಾತೆ ಮುಕ್ತಾಯ ಹಂತದಲ್ಲಿ ಬಡ್ಡಿ ನೀಡದೆ ಇರುವುದರಿಂದ ಸಾವಿರಾರು ಮಂದಿ ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ ಶ್ಯಾನುಭೋಗ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1968ರಿಂದ ನಾಗರಿಕರು ಅವಿಭಜಿತ ಕುಟುಂಬದ ಹೆಸರಿನಲ್ಲಿಯೂ ಪಿಪಿಎ್​ ಖಾತೆ ತೆರೆಯಬಹುದಾಗಿತ್ತು. ಪ್ರತಿವರ್ಷ ರ್ನಿದಿಷ್ಟ ಮೊತ್ತವನ್ನು ಪಿ.ಪಿ.ಎಫ್​ ಖಾತೆಗೆ ಸೇರಿಸಿದರೆ ಆ ಮೊತ್ತಕ್ಕೆ ಆದಾಯ ತೆರಿಗೆಯಲ್ಲಿ ವಿನಾಯತಿಯು ದೊರೆಯುತ್ತದೆ. ಆ ಹಣ ಸಂಚಯಕ್ಕೆ ಬಡ್ಡಿಯನ್ನೂ ಸರ್ಕಾರ ನೀಡುತ್ತಿತ್ತು. ಕೇಂದ್ರ ಹಣಕಾಸು ಸಚಿವಾಲಯವು 2005ರ ಮೇ ತಿಂಗಳಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ ಇನ್ನು ಮುಂದೆ ಕುಟುಂಬ ಪಿಪಿಎಫ್​ ಖಾತೆಗಳನ್ನು ತೆರೆಯುವುದನ್ನು ನಿಷೇಧಿಸಿತು. ಹೆಚ್ಚಿನ ಅಧಿಕಾರಿಗಳು ಈ ಸುತ್ತೋಲೆಯನ್ನು ರ್ನಿಲಕ್ಷಿಸುತ್ತಲೇ ಬಂದಿದ್ದು, ಹೊಸ ಖಾತೆಗಳನ್ನು ತೆರೆಯದಿದ್ದರೂ 2005ರ ಹಿಂದೆ ತೆರೆಯಲಾಗಿದ್ದ ಖಾತೆಗಳನ್ನು 5 ವರ್ಷಗಳಿಗೊಮ್ಮೆ ರಿನಿವಲ್​ ಮಾಡುತ್ತಾ ಮುಂದುವರಿಸಿದ್ದಾರೆ. ಇದೀಗ ಭಾರತದಾದ್ಯಂತ ಕುಟುಂಬ ಪಿಪಿಎಫ್​ ಖಾತೆಗಳನ್ನು ನಿಗದಿತ ಅವಧಿಗಿಂತಲೂ ಹೆಚ್ಚಿನ ಸಮಯಕ್ಕೆ ಮುಂದುವರಿಸಿದ ನೂರಾರು ಪ್ರಕರಣಗಳು ವರದಿಯಾಗಿವೆ. ಅಧಿಕಾರಿಗಳ ರ್ನಿಲಕ್ಷದಿಂದ ಈ ಖಾತೆಗಳಿಗೆ ಬಡ್ಡಿ ಹಣವೇ ಸಿಗುತ್ತಿಲ್ಲ. ಅನೇಕ ಪ್ರಕರಣಗಳಲ್ಲಿ ಬಳಕೆದಾರರ ರಾಷ್ಟ್ರೀಯ ಆಯೋಗವು ಬಡ್ಡಿ ನೀಡುವಂತೆ ಸ್ಪಷ್ಟ ಆದೇಶ ನೀಡಿದರೂ ಅಂಚೆ ಇಲಾಖೆ ಮತ್ತು ಎಸ್​ ಬಿ ಐ ಬ್ಯಾಂಕ್​ ರ್ನಿಲಸುತ್ತಾ ಬಂದಿದೆ. ಏಕರೂಪದ ಆದೇಶ ಹೊರಡಿಸಲು ಆರ್ಥಿಕ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ ದಾಖಲಿಸಲಾಗುವುದು ಎಂದು ತಿಳಿಸಿದರು.

11 ಲಕ್ಷ ಬಡ್ಡಿ ಪಾವತಿಸುವಂತೆ ಆದೇಶಿಸಿದ ನ್ಯಾಯಾಲಯ
ಪಬ್ಲಿಕ್​ ಪ್ರಾವಿಡೆಂಟ್​ ಫಂಡ್​(ಪಿ.ಪಿ.ಎಫ್​) ನಲ್ಲಿ ಹಣ ತೊಡಗಿಸಿದ ಕಾರ್ಕಳದ ಹಿರಿಯ ನಾಗರಿಕ ವೆಂಕಟೇಶ್​ ಕಾಮತ್​ ಅವರಿಗೆ 11 ಲಕ್ಷ ರೂ. ಬಡ್ಡಿ ಮೊತ್ತವನ್ನು ಪಾವತಿಸಲು ಜಿಲ್ಲಾ ಬಳಕೆದಾರರ ಆಯೋಗ ಆದೇಶಿಸಿದೆ.
2001ರಲ್ಲಿ ತೆರೆದ ಖಾತೆ 2016ರಲ್ಲಿ ಮುಕ್ತಾಯಗೊಂಡಿದೆ. ಆದರೆ ಪಿ.ಪಿ.ಎಫ್​ ಖಾತೆಯನ್ನು ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅಂಚೆ ಮಾಸ್ಟರರು ನೀಡಿದ ಮಾರ್ಗದರ್ಶನದಂತೆ 2026ರವರೆಗೆ ಮುಂದುವರಿಸಿದರು. ಆದರೆ ಕಳೆದ ವರ್ಷ ಇವರಿಗೆ ನೋಟಿಸ್​ ನೀಡಿ ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಲಾಗಿದೆ. 2016ರನಂತರದ ಹಣಕ್ಕೆ ಬಡ್ಡಿ ನೀಡುವುದಿಲ್ಲ. ಅಸಲು ಮಾತ್ರ ಕೊಡುತ್ತೇವೆ ಎಂಬುದಾಗಿ ಹೇಳಿ ರೂ.22,19,616 ಮೊತ್ತಕ್ಕೆ ಚೆಕ್​ ನೀಡಿದ್ದರು. ಇದೇ ವೇಳೆ, ಕಾಮತರ ಪಿ.ಪಿ.ಎಫ್​ ಖಾತೆಯಿಂದ ಹಿಂಪಡೆಯಲಾದ ಸುಮಾರು 11,00,444 ರೂ. ಪಡೆಯಲು ಉಡುಪಿಯ ಬಳಕೆದಾರರ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು.
ಸುದೀರ್ಘ ವಿಚಾರಣೆಯ ನಂತರ ಇದೀಗ ಬಳಕೆದಾರರ ಆಯೋಗವು ತೀರ್ಪು ಪ್ರಕಟಿಸಿದ್ದು ಕಾಮತರ ಖಾತೆಯ ಬಡ್ಡಿ ಹಣ ಸುಮಾರು 11,00,444 ರೂ. ಹಾಗೂ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ 50,000 -ರೂ. ನೀಡಲು ಆದೇಶಿಸಿದೆ. ಆದರೆ ಆದೇಶ ಬಂದು 3 ತಿಂಗಳಾದರೂ ಹಣ ಪಾವತಿಯಾಗಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ವೆಂಕಟೇಶ್​ ಕಾಮತ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net