ಸೇವಾನ್ಯೂನ್ಯತೆ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ

Consumar court
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
Published on

ಶಿವಮೊಗ್ಗ: ನಗರದ ವೈದ್ಯರೊಬ್ಬರು ಬುಕ್ ಮಾಡಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬದಲು ಬೇರೊಂದು ಸ್ಕೂಟರ್ ನೀಡಿದ್ದಲ್ಲದೆ, ಸೇವಾಲೋಪವೆಸಗಿದ ಕಾರಣಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಶೇ.12ರ ಬಡ್ಡಿಯೊಂದಿಗೆ 39 ಸಾವಿರ ರೂ. ನೀಡುವಂತೆ ಕಂಪನಿಗೆ ಆದೇಶಿಸಿದೆ. ಮಾನಸಿಕ ಹಿಂಸೆಗೆ 5 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತು 10 ಸಾವಿರ ರೂ. ನೀಡುವಂತೆ ಸೂಚಿಸಿದೆ.

ನಗರದ ಡಾ. ಎಚ್.ಎಂ. ನಟರಾಜ್ ಎಂಬುವರು 2024ರಲ್ಲಿ 39 ಸಾವಿರ ರೂ. ಪಾವತಿಸಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ಆದರೆ ಡಾ. ನಟರಾಜ್ ಅವರು ಬುಕ್ ಮಾಡಿದ್ದ ಸ್ಕೂಟರ್ ಬದಲು ಬೇರೆ ಸ್ಕೂಟರ್ ನೀಡಲಾಗಿತ್ತು. ಈ ಬಗ್ಗೆ ದೂರು ನೀಡಿದಾಗ ಒಂದು ವಾರದೊಳಗೆ ಬುಕ್ ಮಾಡಿರುವ ಸ್ಕೂಟರ್ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಬುಕ್ ಮಾಡಿದ ಸ್ಕೂಟರ್ ನೀಡದೇ ಸೇವಾ ಲೋಪವೆಸಗಿದ್ದಾರೆಂದು ಆರೋಪಿಸಿ ವೈದ್ಯರು ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.

ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರೀಶೀಲಿಸಿ ಮತ್ತು ಅರ್ಜಿದಾರರ ವಾದ ಆಲಿಸಿದ ಗ್ರಾಹಕರ ಆಯೋಗವು, ಆದೇಶದ ದಿನದಿಂದ 45 ದಿನಗಳೊಳಗೆ ಬುಕ್ ಮಾಡಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀಡಬೇಕು. ವಿಫಲವಾದರೆ ಈಗಾಗಲೇ ನೀಡಿರುವ ಸ್ಕೂಟರ್ ಹಿಂಪಡೆದು ಸ್ಕೂಟರ್‌ನ ಮೊತ್ತ 39 ಸಾವಿರ ರೂ. ಅನ್ನು ಶೇ. 12 ಬಡ್ಡಿಯೊಂದಿಗೆ 2024ರ ಜೂ.11ರಿಂದ ಪೂರ್ತಿ ಹಣ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net