ವಿಮಾ ಪರಿಹಾರ ಪಾವತಿಗೆ ಗ್ರಾಹಕರ ಆಯೋಗ ಆದೇಶ

Consumar court
ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿ
Published on

ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಸವಾರನ ಕುಟುಂಬಕ್ಕೆ ಪರಿಹಾರ ನೀಡಲು ನಿರಾಕರಿಸಿದ್ದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 15 ಲಕ್ಷ ರೂ. ಪರಿಹಾರವನ್ನು ಆದೇಶವಾದ 45 ದಿನದೊಳಗೆ ಪಾವತಿಸುವಂತೆ ಆದೇಶಿಸಿದೆ.

ತಪ್ಪಿದ್ದಲ್ಲಿ ಈ ಆದೇಶದ ದಿನದಿಂದ 15 ಲಕ್ಷ ರೂ.ಗೆ ವಾರ್ಷಿಕ ಶೇ.12ರ ಬಡ್ಡಿಯನ್ನು ಪೂರ್ಣ ಹಣ ನೀಡುವವರೆಗೂ ಪಾವತಿಸಲು ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ 20 ಸಾವಿರ ರೂ. ಹಾಗೂ 10 ಸಾವಿರ ರೂ. ಅನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ನೀಡುವಂತೆ ನಿರ್ದೇಶಿಸಿದೆ.

ಭೀಮಪ್ಪ ಎಂಬುವರು ವಿಮಾ ಕಂಪನಿ ವಿರುದ್ಧ ದೂರು ನೀಡಿದ್ದರು. ಭೀಮಪ್ಪ ಅವರ ಪುತ್ರ ಬಸವರಾಜು ಎಂಬುವರು 2022ರ ಏಪ್ರಿಲ್ನಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ವೈಯಕ್ತಿಕ ಅಪಘಾತ ಪರಿಹಾರ ಕೊಡುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯು ಅಪಘಾತ ಸಮಯದಲ್ಲಿ ಬಸವರಾಜು ಎಲ್ಎಲ್ಆರ್ ಹೊಂದಿದ್ದು ಡಿಎಲ್ ಹೊಂದಿಲ್ಲವೆಂದು ಅರ್ಜಿ ತಿರಸ್ಕರಿಸಿತ್ತು. ಈ ಬಗ್ಗೆ ಭೀಮಪ್ಪ ಅವರು ಆಯೋಗಕ್ಕೆ ದೂರು ನೀಡಿದ್ದರು.

ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ವಕೀಲರ ವಾದಗಳನ್ನು ಆಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು ಬೆಂಗಳೂರಿನ ಹೈಕೋರ್ಟ್ ಮತ್ತು ನವದೆಹಲಿಯ ಸುಪ್ರೀಂಕೋರ್ಟ್ ಹಾಗೂ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಆದ ಆದೇಶಗಳನ್ನು ಪರಿಗಣಿಸಿದ ವಿಮಾ ಕಂಪನಿಗೆ ಸೇವಾನ್ಯೂನ್ಯತೆ ಆಧಾರದಲ್ಲಿ ಪರಿಹಾರ ನೀಡುವಂತೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net