

ಕಡೂರು: ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ಸರ್ಕಾರ ಇಲಾಖೆ ಮೂಲಕ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರವನ್ನು ಎಲ್ಲ ಗರ್ಭಿಣಿಯರು ಪಡೆದುಕೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಬಡ ಕುಟುಂಬದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಹೆಚ್ಚಾಗಲಿದೆ. ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಜನಿಸುವ ಮಗು ಆರೋಗ್ಯವಂತವಾಗಿರಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೋಷಣ್ ಅಭಿಯಾನದ ಮೂಲಕ ಸೌಲಭ್ಯ ಕಲ್ಪಿಸುತ್ತಿವೆ ಎಂದರು.
ಪಟ್ಟಣದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ನಿವೇಶನ ನೀಡಲು ಪುರಸಭೆ ನಿರ್ಣಯಿಸಿದೆ. ಮಕ್ಕಳಿಗಾಗಿ ಆಟಿಕೆ ಸಾಮಗ್ರಿಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಿಡಿಪಿಒ ಶಿವಪ್ರಕಾಶ್ ಮಾತನಾಡಿ, ಇತ್ತೀಚೆಗೆ ತಾಲೂಕಿನಾದ್ಯಂತ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿದೆ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸಮಸ್ಯೆಗಳು ತಲೆದೋರಲಿವೆ. ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಸಂದೇಶ್‌ಕುಮಾರ್, ಎಸ್.ಟಿ.ಮೋಹನ್‌ಕುಮಾರ್, ಮುಖಂಡ ಕದಂಬ ವೆಂಕಟೇಶ್, ಅಂಗನವಾಡಿ ಮೇಲ್ವಿಚಾರಕರಾದ ಕವಿತಾ, ಮುಬಿನಾ, ರೂಪಾ, ನೇತ್ರಾವತಿ, ಭಾಗ್ಯಾ, ಅನಿತಾ, ಜಾಕೀರಾ, ಶೋಭರಾಣಿ, ತಿಮ್ಮಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಆಯುಷ್ಮಾನ್ ಭಾರತ್ ಅಧಿಕಾರಿ ಈಶ್ವರ ಇತರರಿದ್ದರು.