

ಮಂಡ್ಯ: ಅಂಗವಿಕಲರಿಗಾಗಿ ಸರ್ಕಾರ ನೀಡುವ ಶೇ.5ರಷ್ಟು ಅನುಷ್ಠಾನದ ಜತೆಗೆ ಕೌಶಲ, ಉದ್ಯೋಗ ಮತ್ತು ಆರೋಗ್ಯ ಒದಗಿಸಬೇಕು. ಈ ಮೂಲಕ ಅಧಿಕಾರಿಗಳು ಅಂಗವಿಕಲರ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -2016ರ ಅನುಷ್ಠಾನ ಕುರಿತು ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಟಾನ ಅಧಿಕಾರಿಗಳು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿನೂತನ ಚಟುವಟಿಕೆಗಳನ್ನು ಒಳಗೊಂಡಂತೆ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸುಮಾರು 12,000 ಮಕ್ಕಳು ಪಾಲ್ಗೊಂಡಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳ ನಂತರ ವಿಶೇಷ ಚೇತನ ಸಮುದಾಯ ಅಭಿವೃದ್ಧಿ ಹೊಂದಬೇಕೆನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹಕರಿಸಬೇಕು. ಸಮಾಜದಲ್ಲಿ ನೂರು ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಅನುಷ್ಠಾನಗಳನ್ನು ಜಾರಿಗೊಳಿಸುವಲ್ಲಿ ಸಲಹೆಗಳನ್ನು ನೀಡಿ ಹಾಗೂ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಅನುಷ್ಠಾನ ಅಧಿಕಾರಿಗಳು ಲಿಖಿತ ರೂಪದಲ್ಲಿ ಸಲಹೆಗಳನ್ನು ತಯಾರಿಸಿ ಒದಗಿಸಿ ಎಂದು ತಿಳಿಸಿದರು.
ಮಹಿಳೆಯರು ಗಭೀರ್ಣಿಯರಾದಾಗ ಹೆಚ್ಚಿನ ಪೌಷ್ಟಿಕ ಆಹಾರ ಸೇವಿಸಬೇಕು. ಅಪೌಷ್ಟಿಕತೆಯಿಂದ ಮಗು ಅಂಗ ವೈಕಲ್ಯತೆ ಸೇರಿದಂತೆ ಇನ್ನಿತರೆ ರೋಗಗಳಿಗೆ ಒಳಗಾಗುವ ಸಂಭವವಿರುತ್ತದೆ. ಮಹಿಳೆಯರಿಗೆ ವಿಶೇಷ ಪೋಷಕಾಂಶ, ಆರೈಕೆ ಮತ್ತು ವ್ಯಾಕ್ಸಿನ್ ಒದಗಿಸುವಲ್ಲಿ ಮಹಿಳಾ ಮತ್ತು ಅರೋಗ್ಯ ಇಲಾಖೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮಂಡ್ಯದಲ್ಲಿ ಮೊದಲ ಬಾರಿಗೆ ಅಂಗವಿಕಲರ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಜ್ಞಾನ ಬಂಢಾರಕ್ಕೆ ಅನುಕೂಲವಾಗಲು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಗ್ರಂಥಾಲಯಗಳನ್ನು ತೆರೆಯಲು ನಿರ್ಧರಿಸಿದ್ದು, ಅದರ ಸದುಪಯೋಗ ಪಡಿದುಕೊಳ್ಳಿ ಎಂದು ಹೇಳಿದರು.
ಅಂಗವಿಕಲರ ಆಯೋಗದ ಆಯುಕ್ತ ದಾಸ್ ಸೂರ್ಯವಂಶಿ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾ, ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟದ ಅಧಿಕಾರಿಗಳು ಒಟ್ಟಾಗಿ ಅಂಗವಿಕಲರ ಏಳಿಗೆಗಾಗಿ ಭಾಗಿಯಾಗಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಂಡ್ಯ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ, ವಿಶೇಷ ಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲ ಅಭಿವೃದ್ಧಿ ಹಂತದಲ್ಲೂ ಮಂಡ್ಯ ಜಿಲ್ಲೆ ಇತಿಹಾಸ ಸೃಷ್ಟಿರಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುಷ್ಪಾ, ಸಹಾಯಕ ಕಾರ್ಯದರ್ಶಿ ಚಂದ್ರು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಠಾನ ಅಧಿಕಾರಿಗಳು ಮತ್ತು ಅಂಗವಿಕಲರ ಸಂಘ, ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.