

ಚಿಕ್ಕಮಗಳೂರು: ಮಲೆನಾಡಿಗರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನ.23 ರಂದು ವಿವಿಧ ಪಕ್ಷ ಹಾಗೂ ಸಂಘಟನೆಗಳ ಸಭೆ ಆಯೋಜಿಸಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಭೀತಿ ಹುಟ್ಟಿಸುತ್ತಿವೆ
ಜಿಲ್ಲಾದ್ಯಂತ ಹಲವಾರು ಅರಣ್ಯ ಸಮಸ್ಯೆಗಳು ಜೀವಂತವಾಗಿರುವ ಪರಿಸ್ಥಿತಿಯಲ್ಲಿ ಹುಲಿಯೋಜನೆ, ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ, ಕಸ್ತೂರಿ ರಂಗನ್ ವರದಿಯಂತಹ ಯೋಜನೆಗಳು ಭೀತಿ ಹುಟ್ಟಿಸುತ್ತಿವೆ. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಜನರು ತಮ್ಮ ಗ್ರಾಮದ ಪಕ್ಷದ ಅರಣ್ಯ ವ್ಯಾಪ್ತಿಗೆ ಕಾಲಿಟ್ಟರೆ ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ಗ್ರಾಮೀಣ ಜನತೆಯ ಪಾರಂಪರಿಕ ಜೀವನವೇ ಹಾಳಾಗುತ್ತದೆ. ವರದಿ ಹೆಸರಿನಲ್ಲಿ ಅರಣ್ಯ ಇಲಾಖೆ ಸ್ಥಳೀಯ ಜನರ ಮೇಲೆ ದೌರ್ಜನ್ಯ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಕಾಫಿ ಮತ್ತಿತರ ಯಾವುದೇ ಕೃಷಿ ಕೈಗೊಳ್ಳಬೇಕಾದರೂ ಅರಣ್ಯ ಇಲಾಖೆಯನ್ನು ಕೇಳಬೇಕಾದ ಪರಿಸ್ಥಿತಿ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಸರ್ವೇ
ರಾಜ್ಯದ 1553 ಹಳ್ಳಿಗಳ ವ್ಯಾಪ್ತಿಯ ಸುಮಾರು 20,600 ಚದರ ಕಿ.ಮೀ. ವ್ಯಾಪ್ತಿಯು ಈ ಯೋಜನೆಗೆ ಒಳಪಡಲಿದ್ದು, ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದವರೆಗೂ ವಿಸ್ತರಿಸಿಕೊಂಡಿದೆ. ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸದೆ ಅವೈಜ್ಞಾನಿಕವಾಗಿ ಉಪಗ್ರಹ ಸರ್ವೇ ಮೂಲಕ ರಾಜ್ಯದ 1,64,280 ಎಕರೆ ಭೂಮಿಯನ್ನು ಈ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಕರ್ನಾಟಕದ ವರದಿ ಜಾರಿಯಾದಲ್ಲಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೂ ಪೆಟ್ಟು ಬೀಳಲಿದ್ದು, ಪ್ರವಾಸೋದ್ಯಮ ನೆಲಕಚ್ಚಲಿದೆ ಎಂದು ಹೇಳಿದರು.
ಭೂಮಿ ಕಾರ್ಪೋರೇಟ್ ಕಂಪನಿಗಳ ಕೈಗೆ
ವರದಿಯಲ್ಲಿ ಕೆಲವು ಸಡಿಲಿಕೆಗಳನ್ನು ನೀಡಿದ್ದರೂ ಸ್ಥಳೀಯರ ಅಧಿಕಾರ ಮೊಟಕುಗೊಳಿಸಿ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳ ಕೈಗೆ ಕಾಫಿ ಬೆಳೆಗಾರರು, ರೈತರು ಮತ್ತು ಜನಸಾಮಾನ್ಯರ ಭೂಮಿ ಒಪ್ಪಿಸುವ ಸರ್ಕಾರದ ಹುನ್ನಾರ ನಡೆಸಲಾಗುತ್ತಿದೆ. ಈ ಎಲ್ಲವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಶೇ.50ಕ್ಕಿಂತ ಹೆಚ್ಚು ಅರಣ್ಯ ಭಾಗ ಹೊಂದಿರುವ ಕಳಸ, ಕುದುರೆಮುಖ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಭಾಗದ ಬಹುತೇಕ ಮಲೆನಾಡು ಪ್ರದೇಶ ಈ ವರದಿಯ ಪ್ರಕಾರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲ್ಪಟ್ಟು ಈ ಪ್ರದೇಶ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸ್ವಾಮ್ಯ ಕಳೆದುಕೊಂಡು ಕೇಂದ್ರ ಮತ್ತು ಕೇಂದ್ರದ ಪರಿಸರ ಇಲಾಖೆಯ ಅಧಿಕಾರ ವ್ಯಾಪ್ತಿಗೆ ಒಳಪಡಲಿದೆ ಎಂದರು.
ಡಿಸಂಬರ್ ನಲ್ಲಿ ವರದಿ ಜಾರಿ
ಡಿಸೆಂಬರ್ ಅಂತ್ಯದೊಳಗೆ ಈ ವರದಿ ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್‍ನ ಹಸಿರು ನ್ಯಾಯ ಮಂಡಳಿ ಆಯಾ ಸರ್ಕಾರಗಳಿಗೆ ಗಡುವು ನೀಡಿದೆ. 2014 ರಿಂದ ಇದುವರೆಗೆ ಹಲವಾರು ಕರಡುಗಳನ್ನು ಸಿದ್ಧಪಡಿಸಲಾಗಿದ್ದು, ರಾಜಕೀಯ ಇಚ್ಚಾಶಕ್ತಿ ಮತ್ತು ಸಮಯ ಪ್ರಜ್ಞೆಯ ಹೋರಾಟದಿಂದ ಕೇರಳ ರಾಜ್ಯದ ಘಟ್ಟ ಪ್ರದೇಶವನ್ನು ಈ ವರದಿ ವ್ಯಾಪ್ತಿಯ ಮೂರನೇ ಕರಡಿನಿಂದ ಕೈಬಿಡಲಾಗಿದೆ ಎಂದರು.
ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಯೋಜನೆ ವಿರುದ್ಧ ಹೋರಾಟ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಸದ್ಯಕ್ಕೆ ಅದನ್ನು ತಡೆಹಿಡಿದಿದೆ. ಅದೇ ಹೋರಾಟದ ಮಾದರಿಯಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟ ಕೈಗೆತ್ತಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಹೋರಾಟ ಸಮಿತಿಯ ಸಂಚಾಲಕರಾದ ಕೆ.ಕೆ.ರಘು, ಕೆ.ಪಿ.ಪ್ರವೀಣ್, ಉಮೇಶ್, ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.