ದೇಶದ ಕಾನೂನು ಸಂಸಾರ ಉಳಿಸುವ ಸಾಧನವಾಗಬೇಕು

14TMK Mahila_Ayoga_VV 2
Published on

ತುಮಕೂರು: ದೇಶದ ಕಾನೂನು ಶೋಷಿತ ಮಹಿಳೆಯರ ಧ್ವನಿಯಾಗಬೇಕು, ಸಂಸಾರ ಉಳಿಸುವ ಸಾಧನವಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಅಭಿಪ್ರಾಯಪಟ್ಟರು.

ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಹಿಳಾ ಕಾನೂನುಗಳ ಕುರಿತು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನ ನೀಡಲಾಗಿದೆ, ಹೆಣ್ಣಿನಲ್ಲಿರುವ ಶಕ್ತಿ ಎಲ್ಲ ರಂಗಗಳಲ್ಲೂ ತನ್ನದೇ ಆದ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದ್ದು, ಕಾನೂನು ಮಹಿಳೆಯರ ಆತ್ಮರಕ್ಷಣೆ ಮತ್ತು ಸ್ವಾಭಿಮಾನ ರಕ್ಷಣೆಗೆ ಉಪಯೋಗವಾಗಬೇಕು ಎಂದರು.

ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ಭಾವಿಸಿದಾಗ ಕೌಟುಂಬಿಕ ಜಗಳಕ್ಕೆ ಅವಕಾಶವಿರುವುದಿಲ್ಲ, ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಮಹಿಳೆಯರಿಂದ ಉಳಿದಿದ್ದು, ಅದನ್ನು ವಿದೇಶಿಯರು ಗೌರವಿಸುತ್ತಿದ್ದಾರೆ ತಿಳಿಸಿದರು.

ಮಹಿಳೆಯರನ್ನು ಅಕ್ಕ, ತಂಗಿ, ತಾಯಿ ಎಂದು ಭಾವಿಸಿ ಸಮಾನವಾಗಿ ಕಾಣುವ ಜತೆಗೆ ಗೌರವ ನೀಡುವುದರಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಪಿ.ಲಕ್ಷ್ಮಮ್ಮ ಅಭಿಪ್ರಾಯಪಟ್ಟರು.

ದೇಶದಲ್ಲಿ ಶೇ.50ರಷ್ಟಿರುವ ಮಹಿಳೆಯರು ದೇಶದ ಅಭಿವೃದ್ಧಿಗಾಗಿ ಎಲ್ಲ ರಂಗಗಳಲ್ಲೂ ಶ್ರಮಿಸಿ, ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ, ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿಯೇ ಅನೇಕ ಕಾನೂನುಗಳಿದ್ದು, ಅವುಗಳ ಅನುಷ್ಠಾನವಾಗಲು ಎಲ್ಲರೂ ಶ್ರಮಿಸಬೇಕು ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮನವಿ ಮಾಡಿದರು.

ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ.ರಾಜ್‌ಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ಎಂ.ರಜನಿ ಮಾತನಾಡಿದರು. ವಕೀಲ ಎಸ್.ರಮೇಶ್, ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಕೆ.ಜಿ.ಪರಶುರಾಮ್, ಡಿವೈಎಸ್‌ಪಿ ತಿಪ್ಪೇಸ್ವಾಮಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಡಿಡಿ ಎಸ್.ನಟರಾಜು ಇತರರಿದ್ದರು.

9000 ದೂರುಗಳ ಇತ್ಯರ್ಥ: ಮಹಿಳಾ ಆಯೋಗಕ್ಕೆ ಪ್ರತಿದಿನ 100 ರಿಂದ 150 ದೂರುಗಳ ದಾಖಲಾಗುತ್ತಿದ್ದು, ಪ್ರಸಕ್ತ ವರ್ಷ 9000 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ, ಮಹಿಳೆಯರ ದೂರು ವಿಷಯದಲ್ಲಿ ಅರ್ಜಿ ಸ್ವೀಕರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿ ಇದೆ ಎಂದು ಶ್ಯಾಮಲಾ ಎಸ್.ಕುಂದರ್ ತಿಳಿಸಿದರು.

ಸ್ಪರ್ಧೆಗಿಳಿಯುವುದು ಬೇಡ: ಪುರುಷ ಮತ್ತು ಮಹಿಳೆ ಸಮಾನರೆಂದು ಭಾವಿಸಬೇಕೇ ಹೊರತು ಸ್ಪರ್ಧೆಗೆ ಇಳಿಯಬಾರದು. ಇತ್ತೀಚಿನ ಮೊಬೈಲ್ ಬಳಕೆಯಿಂದ ಸಾಂಸಾರಿಕ ಸಂಬಂಧ ಬಿಗಡಾಯಿಸುತ್ತಿವೆ, ಮೊಬೈಲ್ ಸದ್ಬಳಕೆ ಆಗಬೇಕೇ ಹೊರತು ಜೀವನಕ್ಕೆ ಮುಳುವಾಗಬಾರದು ಎಂದು ಶ್ಯಾಮಲಾ ಎಸ್.ಕುಂದರ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net