

ಸಿದ್ದಾಪುರ: ಜಿಲ್ಲೆಯಲ್ಲಿ ಜೀವದ ಹಂಗು ತೊರೆದು ಎತ್ತರ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಕಟ್ಟಡ ಕಾರ್ಮಿಕರಿಗೆ ಮುಖ್ಯವಾಗಿ ಬೇಕಾಗಿರುವ ಕಲ್ಯಾಣ ಮಂಡಳಿಯ ಆರೋಗ್ಯ ಚಿಕಿತ್ಸಾ ಸೌಲಭ್ಯವೇ ಜಿಲ್ಲೆಯ ಗ್ರಾಮೀಣ ಭಾಗದ ಕಾರ್ಮಿಕರಿಗೆ ಸಿಗುತ್ತಿಲ್ಲ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕರ ಚಿಕಿತ್ಸಾ ಭಾಗ್ಯ ಎಂಬ ಎರಡು ಬಗೆಯ ಸೌಲಭ್ಯವನ್ನು ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಸುಮಾರು 4,280 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕಲ್ಯಾಣ ಮಂಡಳಿ ನೋಂದಾಯಿಸಿಕೊಂಡಿದೆ.
ಇದರಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ರಾಜರಾಜೇಶ್ವರಿ ಮತ್ತು ಅಶ್ವಿನಿ ಆಸ್ಪತ್ರೆಗಳೂ ಒಳಗೊಂಡಿವೆ. ಇವನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಆಸ್ಪತ್ರೆಗಳನ್ನು ಈ ಸೌಲಭ್ಯಕ್ಕೆ ನೋಂದಾಯಿಸಿಲ್ಲ.
ಮಂಡಳಿಯಿಂದ ನೋಂದಣಿ ಆದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿದ್ದು, ಈ ಪಟ್ಟಿಗೆ ತಾಲೂಕು ವ್ಯಾಪ್ತಿಯ ಸುಸಜ್ಜಿತ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆ ಮಾಡದೆ ಇರುವುದರಿಂದ ಕಟ್ಟಡ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕರ ಚಿಕಿತ್ಸಾ ಭಾಗ್ಯ ಎಂಬ ಎರಡು ಬಗೆಯ ಸೌಲಭ್ಯವನ್ನು ಒದಗಿಸುತ್ತಿದೆ. ಕಾರ್ಮಿಕರ ಆರೋಗ್ಯ ಭಾಗ್ಯದಲ್ಲಿ ನೋಂದಾಯಿತ ಕಾರ್ಮಿಕ ಮತ್ತು ಅವಲಂಬಿತರು ಸಾಮಾನ್ಯ ಚಿಕಿತ್ಸಾ ವೆಚ್ಚದ ಭಾಗವಾಗಿ 300 ರೂ.ಗಳಿಂದ 20,000 ರೂ. ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಕಾರ್ಮಿಕರ ಚಿಕಿತ್ಸಾ ಭಾಗ್ಯ ಯೋಜನೆಯಲ್ಲಿ ಪ್ರಮುಖ ವೈದ್ಯಕೀಯ ಸೌಲಭ್ಯವನ್ನು ನೀಡುವುದರ ಭಾಗವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಫಲಾನುಭವಿ ಹಾಗೂ ಅವಲಂಬಿತರು ಸುಮಾರು 2 ಲಕ್ಷ ರೂ.ಗಳವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶವಿದೆ.
ಗುಣಮಟ್ಟದ ಚಿಕಿತ್ಸೆಗಾಗಿ ಕಟ್ಟಡ ಕಾರ್ಮಿಕರು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದ್ದು, ಹೊರ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕ ಮಂಡಳಿಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ತಾಲೂಕು ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಇದಕ್ಕೆ ಅವಕಾಶ ನೀಡದೆ ಇರುವುದರಿಂದ ಸುಮಾರು 12,700 ನೋಂದಾಯಿತ ಕಾರ್ಮಿಕರು ಸೌಲಭ್ಯ ಪಡೆಯಲು ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸುವಂತಾಗಿದೆ.
ಜಿಲ್ಲೆಯ ಲೋಪಮುದ್ರಾ, ವೈವಾಸ್, ಆರ್.ಐ.ಎಚ್.ಪಿ ಅಮ್ಮತ್ತಿ, ಪಿ.ಎನ್.ಎಂ. ಗೋಣಿಕೊಪ್ಪ, ವಿರಾಜಪೇಟೆ ಆತ್ರೇಯ ಆಸ್ಪತ್ರೆ ಸೇರಿದಂತೆ ತಾಲೂಕು ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳನ್ನು ನೋಂದಾಯಿಸಿಕೊಂಡು ಚಿಕಿತ್ಸಾ ಸೌಲಭ್ಯ. ಪಡೆಯಲು ಅವಕಾಶ ಮಾಡಿಕೊಟ್ಟಲ್ಲಿ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಕಾರ್ಮಿಕರ ಒತ್ತಾಯವಾಗಿದೆ.
ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಿದೆ. ವಾಹನಗಳ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಕಟ್ಟಡ ಕಾರ್ಮಿಕರಿಗೆ ಅಪಘಾತ ಸಂಭವಿಸಿದರೆ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ತಾಲೂಕುವಾರು ಒಂದೊಂದು ಖಾಸಗಿ ಆಸ್ಪತ್ರೆಯನ್ನು ನೋಂದಣಿ ಮಾಡಬೇಕು. ಎಂ.ಎಂ.ಶೌಕತ್ ಅಲಿ ಕಟ್ಟಡ ಕಾರ್ಮಿಕ ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೊಡಗು ಜಿಲ್ಲೆಯ 2 ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದೆ ಇರುವುದರಿಂದ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯನ್ನು ಒತ್ತಾಯಿಸಲಾಗುವುದು. ಹೊರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ಪರೀಕ್ಷಾರ್ಥವಾಗಿ 4ರಿಂದ 5 ಬಾರಿ ಅಲೆದಾಡಬೇಕಾಗುತ್ತದೆ. ಜಿಲ್ಲೆಯ ಆಸ್ಪತ್ರೆ ನೋಂದಣಿ ಆದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಕೆ.ವಿ.ಸುನಿಲ್ ಜಿಲ್ಲಾಧ್ಯಕ್ಷ, ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆ ಕಳೆದ 35 ವರ್ಷಗಳಿಂದ ಕಟ್ಟಡ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ 2 ಖಾಸಗಿ ಆಸ್ಪತ್ರೆಗಳು ನೋಂದಣಿ ಆಗಿರುವುದನ್ನು ಹೊರತುಪಡಿಸಿದರೆ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಆಸ್ಪತ್ರೆ ನೋಂದಣಿಯಾಗಿಲ್ಲ. ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ವಾಹನ ಸೌಲಭ್ಯ ಕಡಿಮೆಯಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ತಾಲೂಕುಗಳ ಖಾಸಗಿ ಆಸ್ಪತ್ರೆಗಳನ್ನೂ ನೋಂದಾಯಿಸಿಕೊಂಡು ಸೌಲಭ್ಯ ಒದಗಿಸಬೇಕು. ಶಾಜಿ ಮ್ಯಾಥ್ಯು ಕಟ್ಟಡ ಕಾರ್ಮಿಕ, ಅಮ್ಮತ್ತಿ ಈ ಹಿಂದೆ ಮೂರು ವರ್ಷಕ್ಕೆ ಇದ್ದಂತೆ ನವೀಕರಣವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾರ್ಮಿಕ ನೊಂದಣಿಗೆ ಪ್ರತ್ಯೇಕ ಸಾಫ್ಟ್‌ವೇರ್ ಅಳವಡಿಸಿ ನೋಂದಾಯಿತ ಕಾರ್ಮಿಕರು ಪ್ರತಿವರ್ಷ ನವೀಕರಣ ಮಾಡಬೇಕಾಗಿದ್ದು ಇದರ ಬಗ್ಗೆ ಕಾರ್ಮಿಕ ಇಲಾಖೆ ಜಾಗೃತಿ ಮೂಡಿಸದೆ ಸಕಾಲದಲ್ಲಿ ನವೀಕರಿಸದ ಸಾಕಷ್ಟು ನೈಜ ಕಾರ್ಮಿಕರ ಕಾರ್ಡ್ ರದ್ದಾಗಿದೆ. ಇಲಾಖೆಯಿಂದ ಹಿರಿತನದ ಆಧಾರದ ಮೇರೆಗೆ ಸವಲತ್ತು ವಿತರಣೆ ನಡೆಯುತ್ತಿದ್ದು, ನವೀಕರಣ ಕಾಲಮಿತಿಯನ್ನು ಮೂರು ವರ್ಷಕ್ಕೆ ವಿಸ್ತರಿಸಿದ್ದಲ್ಲಿ ಈ ಕಾರ್ಡ್‌ಗಳು ನವೀಕರಿಸಲು ಅವಕಾಶವಿದ್ದು ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಎಲಿಜಬೆತ್ ಸುಧಾ ಸಹಾಯಕ ಕಟ್ಟಡ ಕಾರ್ಮಿಕರು, ಅಮ್ಮತ್ತಿ ಜಿಲ್ಲೆಯಲ್ಲಿ ಈ ಹಿಂದೆ ಯಾವುದೇ ಆಸ್ಪತ್ರೆ ನೋಂದಣಿ ಆಗದೆ ಇದ್ದು ಕಾರ್ಮಿಕರು ಬೇಡಿಕೆಗೆ ಅನುಸಾರ ಇಲಾಖೆಯ ಗಮನಕ್ಕೆ ತಂದಿದ್ದು ಪರಿಣಾಮ ಜಿಲ್ಲಾ ಕೇಂದ್ರವಾದ ಮಡಿಕೇರಿಯ ಅಶ್ವಿನಿ ಮತ್ತು ರಾಜರಾಜೇಶ್ವರಿ ಆಸ್ಪತ್ರೆಗಳಲ್ಲಿ ಕಟ್ಟಡ ಕಾರ್ಮಿಕರ ಚಿಕಿತ್ಸಾ ಸೌಲಭ್ಯಕೆ ನೋಂದಾಯಿಸಿದ್ದು ಸೌಲಭ್ಯ ನೀಡಲಾಗುತ್ತಿದೆ. ಸಂಘಟನೆಗಳು ಹೆಚ್ಚಿನ ಆಸ್ಪತ್ರೆಯನ್ನು ನೋಂದಾಯಿಸುವಂತೆ ಮನವಿ ನೀಡಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಕಾವೇರಿ ಕಾರ್ಮಿಕ ಅಧಿಕಾರಿ, ಕೊಡಗು ಜಿಲ್ಲೆ