

ಸಿದ್ದಾಪುರ : ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳು ಹಾಗೂ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂನ್ 28 ರಿಂದ ಜುಲೈ 3ರವರೆಗೆ ರಾಜ್ಯಾದ್ಯಂತ ನಡೆದ ಕಟ್ಟಡ ಕಾರ್ಮಿಕರ ಪ್ರತಿಭಟನೆ ಭಾಗವಾಗಿ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನೆಲ್ಯಹುದಿಕೇರಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಸಿಗುತ್ತಿದ್ದ ಸೌಲಭ್ಯಗಳು ಸಿಗುತ್ತಿಲ್ಲ. ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಪಿಂಚಣಿದಾರರ ಪಿಂಚಣಿ ನಿಂತು ಹೋಗಿದೆ. ಹೀಗಾಗಿ ಅವರ ಜೀವನ ಕಷ್ಟಕ್ಕೆ ಸಿಲುಕಿದೆ. ಶೈಕ್ಷಣಿಕ ಸಹಾಯಧನ ಬಿಡುಗಡೆಗಾಗಿ ನಾವು ಕೊನೆಗೆ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಕಾರ್ಮಿಕರು ಕೇಳದಿದ್ದರೂ ಲ್ಯಾಪ್‌ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್‌ಗಳನ್ನು ಖರೀದಿಸಿದ್ದೀರಿ. ಇದಕ್ಕಾಗಿ ಮಂಡಳಿಯ ನೂರಾರು ಕೋಟಿ ರೂ. ಖರ್ಚು ಮಾಡಿದ್ದೀರಿ. ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಸಾಮಾಜಿಕ ಸುರಕ್ಷೆ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಕಲ್ಯಾಣ ಮಂಡಳಿಯ ಸದುದ್ದೇಶವೇ ನಿಮ್ಮ ಅವಧಿಯಲ್ಲಿ ಮಣ್ಣುಪಾಲಾಗಿದೆ. ಕಲ್ಯಾಣ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ಬಡಜನ ವಿರೋಧಿ ನಡೆಯನ್ನು ಕಟ್ಟಡ ಕಾರ್ಮಿಕರಾದ ನಾವು ಖಂಡಿಸುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಹರಿದಾಸ್, ಸಿಐಟಿಯು ಭರತ್, ಶಾಜಿ ರಮೇಶ್, ಗ್ರಾಮ ಸಮಿತಿ ಯ ಮನೋಹರ್, ಜೋನಿ, ಅನಿಲ್, ಬಿಜು ಇತರರು ಇದ್ದರು.