

ಮಡಿಕೇರಿ: ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಸಭೆ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪರವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ನಡೆದ ಸಭೆಯಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಾಣ ಕಾರ್ಯದ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಪಿ.ರಮೇಶ್‌ರವರು ಪ್ರಾಸ್ತವಿಕವಾಗಿ ಮಾತನಾಡಿ, ಸರ್ವೋದಯ ಸಮಿತಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದು, ಜಿಲ್ಲೆಯಲ್ಲಿ ಗಾಂಧಿ ವಿಚಾರಧಾರೆಗಳ ಕುರಿತು ಬೆಳಕು ಚೆಲ್ಲುತ್ತಾ ಸಾಗಿರುವುದು ಶ್ಲಾಘನೀಯ ಎಂದರು.
ಸ್ಮಾರಕ ಭವನ ನಿರ್ಮಾಣಕ್ಕೆ ಸಕಾಲದಲ್ಲಿ ಸ್ಪಂದಿಸಿದ ಸರ್ಕಾರ ಈಗಾಗಲೇ ರೂ.೫೦ ಲಕ್ಷ ಬಿಡುಗಡೆ ಮಾಡಿದೆ. ಇದು ಸರ್ವೋದಯ ಸಮಿತಿಯ ನಿರಂತರ ಕಾರ್ಯ ಚಟುವಟಿಕೆಯ ಫಲವಾಗಿದೆ. ಸ್ಮಾರಕ ಭವನ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ರಮೇಶ್ ಹೇಳಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಕೆ.ಟಿ.ಬೇಬಿ ಮ್ಯಾಥ್ಯೂ, ಎಂ.ಎಂ.ಲಿಯಾಕತ್ ಆಲಿ, ಅಂಬೆಕಲ್ ನವೀನ್, ಟಿ.ಎಂ.ಮುದ್ದಯ್ಯ, ರೇವತಿ ರಮೇಶ್, ಪ್ರೇಮಾ ಕೃಷ್ಣಪ್ಪ, ಯಶೋಧ ಉಪಸ್ಥಿತರಿದ್ದರು.