

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎದುರಾಗಿರುವ ಕಟ್ಟಡ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಆಹ್ವಾನಿಸಿದ್ದ ಟೆಂಡರ್‌ಅನ್ನು ಗುತ್ತಿಗೆದಾರರ ಅವಾರ್ಡ್ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಅನುಮತಿ ನೀಡಿದ್ದಲ್ಲಿ ಸಾರ್ವಜನಿಕರಿಗೆ ಹೊರೆಯಾಗಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಪಾಲಿಕೆ ಪ್ರದೇಶದಲ್ಲಿ ನಿತ್ಯ 4,500 ಮೆಟ್ರಿಕ್ ಟನ್ ಪ್ರಮಾಣದ ಕಟ್ಟಡ ಹಾಗೂ ಭಗ್ನಾವಶೇಷ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪ್ರಸ್ತುತ 1,750 ಮೆ. ಟನ್ ತ್ಯಾಜ್ಯವನ್ನು ಸಂಸ್ಕರಿಸುವ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ತ್ಯಾಜ್ಯವನ್ನು ವಾರ್ಡ್‌ಗಳಿಂದ ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಸಾಗಣೆ ಮಾಡಲು ವಿವಿಧ ಪ್ಯಾಕೇಜ್ ಆಹ್ವಾನಿಸಲಾಗಿತ್ತು. ಜತೆಗೆ ಬಾಕಿ ಉಳಿದ 3,000 ಟನ್ ಸಂಗ್ರಹಣೆ, ಸಾಗಣೆ ಹಾಗೂ ಸಂಸ್ಕರಣೆಗಾಗಿ ಪ್ರತ್ಯೇಕ ಪ್ಯಾಕೇಜ್‌ಅನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಅಡಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿ ಪಾಲಿಕೆ ಹೇಳಿತ್ತು. ಈಗ ಇಷ್ಟೂ ಪ್ಯಾಕೇಜ್‌ಅನ್ನು ಮುಂದಿನ 15 ವರ್ಷಕ್ಕೆ ಒಟ್ಟು 2,227 ಕೋಟಿ ರೂ. ಮೊತ್ತದ ಟೆಂಡರ್‌ಗೆ ಶಿಾರಸು ಮಾಡಲಾಗಿದೆ.
ಟೆಂಡರ್ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಕೆಯಾದ ಬೆನ್ನಲ್ಲೇ ಗುತ್ತಿಗೆಯನ್ನು ಒಂದೇ ಕಂಪನಿಗೆ ವಹಿಸಲಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಟೆಂಡರ್‌ನಲ್ಲಿ ಹಲವು ಕಂಪನಿಗಳು ಬಿಡ್ ಮಾಡಿದ್ದರೂ, ತಾಂತ್ರಿಕ ನೆಪವೊಡ್ಡಿ ಏಕ ಕಂಪನಿಗೆ ಗುತ್ತಿಗೆ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇ-ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಿರುವ ಕಾರಣ ಬಿಡ್ ಮಾಡಿದ್ದವರ ಪೈಕಿ ಯಾರಿಗಾದರೂ ಒಬ್ಬರಿಗೆ ಗುತ್ತಿಗೆ ವಹಿಸಬೇಕಿತ್ತು. ಹೀಗಾಗಿ ಅವಾರ್ಡ್ ನೀಡಿದ್ದು, ಒಪ್ಪಿಗೆಗಾಗಿ ಸರ್ಕಾರವನ್ನು ಕೋರಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಘೋಷಣೆ:
ಕಳೆದ ಮಾ.29ರಂದು ಮಂಡಿಸಿದ್ದ ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ನಲ್ಲಿ ಕಟ್ಟಡ ತ್ಯಾಜ್ಯ ಸಂಗ್ರಹ, ಸಾಗಣೆ ಹಾಗೂ ವಿಲೇವಾರಿಗೆ ಹೊಸ ವಿಧಾನ ಅಳವಡಿಸಿಕೊಳ್ಳಲಾಗುವುದು ಎಂಬ ಘೋಷಣೆ ಮಾಡಲಾಗಿತ್ತು. ಇದರನ್ವಯ ಈ ಹಿಂದೆಯೇ ಆಹ್ವಾನಿಸಿದ್ದ ಟೆಂಡರ್‌ಗೆ ಇತ್ತೀಚಿಗಷ್ಟೇ ಪಾಲಿಕೆಯ ಒಪ್ಪಿಗೆ ನೀಡಿದೆ. ಈ ವಿಷಯವನ್ನು ಬಜೆಟ್ ದಿನವೇ ಆಗಿನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿಕೆ ನೀಡಿದ್ದರು. ಆನಂತರ ಟೆಂಡರ್ ಪ್ರಕ್ರಿಯೆ ಮುಂದುವರಿದು ಇದೀಗ ಸರ್ಕಾರದ ಅನುಮೋದನೆ ಪಡೆಯುವ ಹಂತ ತಲುಪಿದೆ.
ಘಟಕಗಳಿಲ್ಲದೆ ವಿಲೇ ಹೇಗೆ ಸಾಧ್ಯ?:
ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಟ್ಟಡ ತ್ಯಾಜ್ಯವನ್ನು ಬೆಂಗಳೂರು ಉತ್ತರ ಭಾಗದ ಕಣ್ಣೂರು ಹಾಗೂ ಚಿಕ್ಕಜಾಲ ಘಟಕಕ್ಕೆ ತಂದು ಸುರಿಯಲಾಗುತ್ತಿದೆ. ಇದನ್ನು ಇಲ್ಲೇ ಸಂಸ್ಕರಣೆಗೂ ಅವಕಾಶ ಮಾಡಿಕೊಡಲಾಗಿದೆ. ಆದರೆ, ನಗರದಲ್ಲಿ ಉತ್ಪತ್ತಿಯಾಗುವ ಎಲ್ಲ ಕಟ್ಟಡ ತ್ಯಾಜ್ಯವನ್ನು ಈ ಎರಡೂ ಘಟಕಗಳಲ್ಲಿ ಸಂಸ್ಕರಿಸಲು ಸಾಧ್ಯವಾಗದು. ಹಾಗಾಗಿ ಹೊಸದಾಗಿ 4 ಘಟಕ ಸ್ಥಾಪಿಸುವ ಪ್ರಸ್ತಾಪ ಇನ್ನೂ ಕಾಗದದ ಮೇಲೆ ಉಳಿದಿದೆ. ಹೀಗಿರುವಾಗ ಸ್ಥಳ ಆಯ್ಕೆ ಅಂತಿಮ ಮಾಡದಿದ್ದರೂ, ಟೆಂಡರ್ ಅವಾರ್ಡ್ ಮಾಡಲು ಪಾಲಿಕೆ ಅಧಿಕಾರಿಗಳು ಏಕಿಷ್ಟು ಅವಸಾರ ಮಾಡುತ್ತಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಪ್ರಶ್ನಿಸಿದ್ದಾರೆ.
ಕಟ್ಟಡ ತ್ಯಾಜ್ಯಕ್ಕೂ ಬಳಕೆದಾರರ ಶುಲ್ಕ?:
ಪ್ರಸಕ್ತ ಆರ್ಥಿಕ ವರ್ಷದಿಂದ ಘನತ್ಯಾಜ್ಯಕ್ಕೆ ಬಳಕೆದಾರರ ಶುಲ್ಕವನ್ನು ಆಸ್ತಿತೆರಿಗೆ ಅಡಿಯಲ್ಲಿ ಸಂಗ್ರಹಿಸಲು ಚಾಲನೆ ದೊರೆತಿದೆ. ಆಸ್ತಿ ವಿಸ್ತೀರ್ಣ ಆಧರಿಸಿ ಇಂತಿಷ್ಟು ಶುಲ್ಕ ವಿಧಿಸಿದ್ದು, ಇದರನ್ವಯ ವಸೂಲು ಮಾಡಲಾಗುತ್ತಿದೆ. ಇದೇ ರೀತಿ ಕಟ್ಟಡ ತ್ಯಾಜ್ಯವನ್ನು ಒಂದು ಬಾರಿಯಾಗಿ ಬಳಕೆದಾರರ ಶುಲ್ಕವಾಗಿ ಪ್ರತ್ಯೇಕವಾಗಿ ವಸೂಲು ಮಾಡಲು ಚಿಂತನೆ ನಡೆದಿದೆ. ಇದು ನಾಗರಿಕರಿಗೆ ಹೊರೆ ಆಗಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಕಟ್ಟಡ ತ್ಯಾಜ್ಯ ವಿಲೇಗೆ ಟನ್ ಒಂದಕ್ಕೆ ಇಂತಿಷ್ಟು ಹಣ ಪಾವತಿಸುವ ಜತೆಗೆ ಬಳಕೆದಾರರ ಶುಲ್ಕವನ್ನೂ ವಸೂಲು ಮಾಡುವುದು ಎಷ್ಟಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿಲ್ಲ.