

ಆರ್.ಕೃಷ್ಣ ಮೈಸೂರು
ಎಲ್ಲೆಂದರಲ್ಲಿ ಡೆಬ್ರಿಸ್ (ಕಟ್ಟಡಗಳ ತ್ಯಾಜ್ಯ) ಹಾಕಿದರೆ ದಂಡ ವಿಧಿಸಲಾಗುವುದು ಎಂದು ನಗರಪಾಲಿಕೆ ನೀಡಿರುವ ಎಚ್ಚರಿಕೆಗೂ ಮನ್ನಣೆ ನೀಡದ ಜನ, ನಗರದ ಹೊರ ವಲಯದ ಕೆರೆ, ಕಟ್ಟೆ ದಂಡೆಯನ್ನೂ ನೋಡದೆ ಖಾಲಿ ಜಾಗಳಲ್ಲಿ ವಿಲೇವಾರಿ ಮಾಡುತ್ತಿದ್ದಾರೆ.
ಡೆಬ್ರಿಸ್ ವಿಲೇವಾರಿಗೆ ಪ್ರತ್ಯೆಕವಾಗಿ ನಗರಪಾಲಿಕೆ, ಮುಡಾದಿಂದ ಸ್ಥಳ ನಿಗದಿ ಮಾಡಲಾಗಿದೆ. ಅಲ್ಲಿಯೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಈಗಾಗಲೇ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡದವರಿಗೆ ದಂಡ ವಿಧಿಸುವುದರೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಸಹ ನೀಡಲಾಗಿದೆ.
ಆದರೆ ಈ ಎಚ್ಚರಿಕೆಗೆ ಕ್ಯಾರೆ ಎನ್ನದ ಜನ, ಖಾಲಿ ಜಾಗಗಳು, ರಿಂಗ್ ರೋಡ್ ಸುತ್ತಮುತ್ತಲ ನಿವೇಶನ, ಹಳ್ಳ, ಕೊಳ್ಳ, ಕೆರೆ ದಂಡೆಯಲ್ಲಿಯೂ ಡೆಬ್ರಿಸ್ ಸುರಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಮೂಲಕ ‘ಸ್ವಚ್ಛ ಮತ್ತು ಸುಂದರ ನಗರಿ ಮೈಸೂರು’ ಎಂಬ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.
ಡೆಬ್ರಿಸ್ ಹಾಕುವ ಸಲುವಾಗಿಯೇ ಮುಡಾ ವ್ಯಾಪ್ತಿಗೆ ಸೇರಿದ್ದ ನಗರದ ಹೊರ ವಲಯದ ಹಂಚ್ಯಾ-ಸಾತಗಳ್ಳಿ ಎ ವಲಯದಲ್ಲಿನ 9 ಎಕರೆ ಪ್ರದೇಶವನ್ನು ಗುರುತಿಸಿದೆ. ಈ ಸ್ಥಳದಲ್ಲಿಯೇ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಪಾಲಿಕೆ ಬಿಗಿಯಾದ ಸೂಚನೆ ನೀಡಿದೆ. ಅದಕ್ಕೆ ಜನ ಕಿಮ್ಮತ್ತು ಕೊಡದಿರುವುದು ಸಮಸ್ಯೆಗೆ ಕಾರಣವಾಗಿದೆ.
ಹೊಸ ಬಡಾವಣೆ ಅಭಿವೃದ್ಧಿ
ಬೆಂಗಳೂರು ಬಳಿಕ ತ್ವರಿತವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ನಿತ್ಯ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿಯೇ ಇತ್ತೀಚೆಗೆ ಡೆಬ್ರಿಸ್ ಉತ್ಪಾದನೆಯಾಗುತ್ತಿದೆ. ಅಲ್ಲದೇ ನಗರದ ಹಲವಾರು ಹೊಸ ಬಡಾವಣೆಗಳು ನಗರ ಪಾಲಿಕೆ ವ್ಯಾಪ್ತಿಗೆ ಬಂದಿವೆ. ಅಂತಹ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಇಲ್ಲೆಲ್ಲಾ ಉತ್ಪಾದನೆಯಾದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಹೋದರೆ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವುದರಲ್ಲಿ ಅನುಮಾನವಿಲ್ಲ. ನಗರದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಟ್ಟಡ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ:
ಹಂಚ್ಯಾ-ಸಾತಗಳ್ಳಿ ಬಳಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಮೈಸೂರು ನಗರಪಾಲಿಕೆಯಿಂದ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಘಟಕದಲ್ಲಿ ನಿತ್ಯ 100 ಟನ್ ಸಾಮರ್ಥ್ಯದ ಕಟ್ಟಡ ತ್ಯಾಜ್ಯ ಈ ಘಟಕದಲ್ಲಿ ವಿಲೇವಾರಿಯಾಗಲಿದೆ. ರಸ್ತೆ ನಿರ್ಮಾಣ, ಕಾಂಕ್ರಿಟ್ ಬ್ಲಾಕ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ತ್ಯಾಜ್ಯ ಮರು ಬಳಕೆಯಾಗಲಿದೆ. ಸದ್ಯ ನಗರದಲ್ಲಿ 50ರಿಂದ 60 ಟನ್ ಡೆಬ್ರಿಸ್ ಉತ್ಪಾದನೆಯಾಗುತ್ತಿದೆ.
ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಸಾಮರ್ಥ್ಯದ ಘಟಕ ಸ್ಥಾಪಿಸಲೂ ಉದ್ದೇಶಿಸಲಾಗಿದೆ. ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಟ್ಟಡ ತ್ಯಾಜ್ಯವನ್ನು ಸಂಸ್ಕರಿಸಿ ಅದರಲ್ಲಿ ನೆಲಹಾಸು(ಟೈಲ್ಸ್), ಕಟ್ಟಡಕ್ಕೆ ಬೇಕಾಗುವ ಚಿಕ್ಕಪುಟ್ಟ ವಸ್ತುಗಳನ್ನು ಮರು ನಿರ್ಮಾಣ ಮಾಡುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯವರೇ ಅಗಿರುವುದರಿಂದ ನಗರದ ಸೌಂದರ್ಯ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಅನುಮತಿ ನೀಡಿ ಶೀಘ್ರ ಚಾಲನೆಗೊಳ್ಳುವಂತೆ ಮಾಡಲಿದ್ದಾರೆ ಎನ್ನುವ ಆಶಾಭಾವನೆಯನ್ನು ಪಾಲಿಕೆ ಹೊಂದಿದೆ. ಎಲ್ಲದಕ್ಕೂ ಸಾರ್ವಜನಿಕರ ಸ್ಪಂದನೆ ಪಾಲಿಕೆಗೆ ಅಗತ್ಯವಾಗಿದೆ.
ಇ-ತ್ಯಾಜ್ಯವೂ ಬಹುದೊಡ್ಡ ಸಮಸ್ಯೆ
ನಗರದಲ್ಲಿ ಡೆಬ್ರಿಸ್ ಸಮಸ್ಯೆ ಒಂದೆಡೆಯಾದರೆ ಮೈಸೂರು ನಗರಕ್ಕೆ ಹೊಂದಿಕೊಂಡರೆ ಇರುವ ಕೈಗಾರಿಕಾ ಪ್ರದೇಶದಲ್ಲಿ ಇರುವ ಇಂಡಸ್ಟ್ರಿಗಳಿಂದ ಉತ್ಪಾದನೆ ಅಗುವ ಇ-ತ್ಯಾಜ್ಯ ಸಮಸ್ಯೆ ಮತ್ತೊಂದೆಡೆ ಭೂತಾಕಾರವಾಗಿ ಕಾಡುತ್ತಿದೆ. ಕಟ್ಟಡ ತ್ಯಾಜ್ಯಗಳಿಗಿಂತ ಇ-ತ್ಯಾಜ್ಯ ಮಾರಕವಾಗಿದೆ. ಇದು ಪರಿಸರಕ್ಕೆ ವಿಷಕಾರಿ ಅಗಿರುವುದರಿಂದ ಇವುಗಳನ್ನು ವೈಜ್ಞಾನಿಕವಾಗಿಯೇ ವಿಲೇವಾರಿ ಮಾಡಬೇಕಿದೆ. ಆದರೆ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ತಂತ್ರಜ್ಞಾನ ವ್ಯವಸ್ಥೆ ಇಲ್ಲದಿರುವುದರಿಂದ ತ್ಯಾಜ್ಯವನ್ನು ಕೈಗಾರಿಕಾ ಪ್ರದೇಶದ ಖಾಲಿ ಜಾಗದಲ್ಲಿ ಬಿಸಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹಾಗಾಗಿ ನಗರದ ಸೌಂದರ್ಯ ಕಾಪಾಡುವುದು ಎಲ್ಲರ ಕರ್ತವ್ಯ. ಸ್ವಚ್ಛ ನಗರಿಯಾಗಿರುವ ಮೈಸೂರಿನ ಅಂದವನ್ನು ಉಳಿಸಿಕೊಳ್ಳಲು ಎಲ್ಲರೂ ಸಹಕಾರ ನೀಡಬೇಕು. ನಿಯಮ ಉಲ್ಲಂಘಿಸಿ ತ್ಯಾಜ್ಯ ಸುರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್
ಆಯುಕ್ತ, ಮೈಸೂರು ನಗರಪಾಲಿಕೆ.