

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿ ನೂತನ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಸಿದ್ಧಪಡಿಸಿರುವ ಕ್ರಿಯಾಯೋಜನೆಯನ್ನು ಶಾಸಕ ನಿರಂಜನಕುಮಾರ್ ಪರಿಶೀಲಿಸಿದರು.
ಭಾನುವಾರ ಸಾರಿಗೆ ಸಂಸ್ಥೆಯ ಇಂಜಿನಿಯರ್ ಮಹೇಶ್ ಜತೆ ಹಂಗಳ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಸಿದ್ಧಪಡಿಸಿದ ನೀಲಿನಕ್ಷೆ ಹಾಗೂ ಸೂಕ್ತ ಸ್ಥಳಗಳ ಬಗ್ಗೆ ಚರ್ಚಿಸಿದರು. ಹೋಬಳಿ ಕೇಂದ್ರವಾದ ಗ್ರಾಮದ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣ ನಿರ್ಮಿಸಲು ಹೆಚ್ಚಿನ ಸ್ಥಳಾವಕಾಶ ಇಲ್ಲದ ಕಾರಣ ಬಂಡೀಪುರ ರಸ್ತೆಯಲ್ಲಿ ವಿಶಾಲವಾದ ಸರ್ಕಾರಿ ಭೂಮಿಯನ್ನು ಗುರುತಿಸಿ ಅಲ್ಲಿಯೇ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಾಣಿಜ್ಯ ಮಳಿಗೆ ನಿರ್ಮಿಸಲು ಕ್ರಮ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಉತ್ತರ ಭಾಗದಲ್ಲಿ ಮಡಹಳ್ಳಿಗೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ನೀಡುವಂತೆ ಸಾರಿಗೆ ಸಚಿವ ಲಕ್ಷಣ ಸವದಿ ಅವರಿಗೆ ಮನವಿ ಮಾಡಲಾಗಿದೆ. ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಸಚಿವರು, ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ನಿರಂಜನಕುಮಾರ್ ವಿಜಯವಾಣಿಗೆ ತಿಳಿಸಿದರು.