

ಸಾಗರ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಾಚಾರ್ಯರ ನೂತನ ಕಚೇರಿ ಮತ್ತು ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಹ ತೊಡಗಿಸಿಕೊಳ್ಳಬೇಕು. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ ನೀಡಲು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲಾಗುವುದು. ಈಗಾಗಲೇ ರಂಗಮಂದಿರ ನಿರ್ಮಾಣಕ್ಕೆ ಬೇಕಾದ ಅನುದಾನ ಸಹ ಕಾಯ್ದಿರಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಅತ್ಯಂತ ಮಹತ್ತರ ಘಟ್ಟ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶಾಲೆ-ಕಾಲೇಜು ಅಭಿವೃದ್ಧಿಯಾದರೆ ಮಕ್ಕಳ ಜ್ಞಾನ ಹೆಚ್ಚುತ್ತದೆ. ಜತೆಗೆ ಊರು ಶೈಕ್ಷಣಿಕವಾಗಿ ಮುಂದುವರಿಯುತ್ತದೆ. ಶಾಲಾ-ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಇಚ್ಛಾಶಕ್ತಿ ಅಗತ್ಯ. ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯದಲ್ಲಿಯೆ ಉತ್ತಮ ಹೆಸರು ಪಡೆದಿದೆ ಎಂದರು.
ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಉಪನಿರ್ದೇಶಕ ಬಿ.ಕೃಷ್ಣಪ್ಪ, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ, ಪ್ರಮುಖರಾದ ಬಿ.ಎ.ಇಂದೂಧರ ಗೌಡ, ಗಣಪತಿ ಮಂಡಗಳಲೆ, ಬಸವರಾಜ್, ಉಮೇಶ್ ಸೂರನಗದ್ದೆ, ಭವ್ಯಾ ಕೃಷ್ಣಮೂರ್ತಿ, ಲೋಕೇಶ್, ಕೆ.ವಿ.ರವೀಂದ್ರ, ಪ್ರಿಯಕುಮಾರ್, ವಿ.ಸಿ.ಪಾಟೀಲ್, ತೀರ್ಥಪ್ಪ, ಎಲ್.ಎಂ.ಹೆಗಡೆ, ನರಹರಿ ಭಟ್ ಇತರರಿದ್ದರು.