ನಗರದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ: ಭೂಮಿ ಪೂಜೆ ನೆರವೇರಿಸಿದ ಶಾಸಕ ರವಿಕುಮಾರ್ ಗಣಿಗ

Construction of well equipped central library Mandya
Published on

ಮಂಡ್ಯ: ಓದುಗರ ಹಲವು ವರ್ಷದ ಬೇಡಿಕೆ ಈಡೇರಿಸುವ ಸಮಯ ಸಮೀಪಿಸುತ್ತಿದೆ. ಅದರಂತೆ ಕೆಲವೇ ತಿಂಗಳಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ ನಿರ್ಮಾಣವಾಗಲಿದ್ದು, ಇದಕ್ಕೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.

ನಗರದಲ್ಲಿ ಕೇಂದ್ರ ಗ್ರಂಥಾಲಯವಿದ್ದರೂ ಮೂಲ ಸೌಲಭ್ಯದಿಂದ ವಂಚಿತವಾಗಿತ್ತು. ಜತೆಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಇರಲಿಲ್ಲ. ಜಿಲ್ಲಾ ಕೇಂದ್ರವಾಗಿರುವುದರಿಂದ ಪ್ರತಿದಿನ 150 ರಿಂದ 200 ಜನ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿರುವವರಿಗೆ ಸರ್ಕಾರಿ ಗ್ರಂಥಾಲಯವೇ ಆಧಾರವಾಗಿದೆ. ಆದರೆ ಪ್ರಸ್ತುತ ಇರುವ ಗ್ರಂಥಾಲಯಕ್ಕೆ ಎಲ್ಲ ಸೌಲಭ್ಯ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಬೇಕೆನ್ನುವ ಬೇಡಿಕೆ ಕೇಳಿಬರುತ್ತಿತ್ತು. ಅದಕ್ಕೆ ಈಗ ಸ್ಪಂದನೆ ಸಿಕ್ಕಿದೆ.

ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದ ಮುಂಭಾಗ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 80 ಲಕ್ಷ ರೂ ಅನುದಾನ ನೀಡಲಾಗಿದೆ. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಓದುಗರಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಾಗೂ ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕೆನ್ನುವ ಕಾರಣಕ್ಕೆ ಸುಸಜ್ಜಿತವಾದ ಗ್ರಂಥಾಲಯ ಮಾಡಲಾಗುತ್ತಿದೆ. ಇಲ್ಲಿ ಓದುಗರಿಗೆ ಅವಶ್ಯಕವಿರುವ ಎಲ್ಲ ಸೌಲಭ್ಯ ಸಿಗಲಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಂತೋಷ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಉಮೇಶ್ ದ್ಯಾಪಸಂದ್ರ, ಕಾಂಗ್ರೆಸ್ ಮುಖಂಡ ಅಭಿಲಾಷ್, ಗುತ್ತಿಗೆದಾರರಾದ ಚೇತನ್, ಮಹೇಂದ್ರ, ಬಿ.ಎಂ.ವಜ್ರಮುನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net