

ಲಿಂಗದಹಳ್ಳಿ: ಲಿಂಗದಹಳ್ಳಿ-ಚಿಕ್ಕಮಗಳೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 30 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗುವುದು. ಇದರಿಂದ ಉಡೇವಾ ಗ್ರಾಮಸ್ಥರು ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ಹೇಳಿದರು.
ಉಡೇವಾ ಸಮೀಪದ ಮರೆಕಲ್ಲಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಗೆ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಈ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣ ಮತ್ತು ಉಡೇವಾ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣಕ್ಕೂ ಸಹ ಅನುದಾನ ನೀಡಲಾಗುವುದು ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಇನ್ನಿತರ ಮೂಲ ಸೌಲಭ್ಯಗಳಿಗೂ ಸಹ ಅಗತ್ಯ ಅನುದಾನ ಒದಗಿಸುತ್ತಿರುವುದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ವಿನಾಕರಣ ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಉಡೇವಾ ಗ್ರಾಪಂ ಅಧ್ಯಕ್ಷ ಭಾರತಿ ಸಿ ರಾಜಪ್ಪ, ಸದಸ್ಯರಾದ ಟಿ.ಶ್ರೀೀನಿವಾಸ್, ಪಿಡಿಒ ಬಿ.ಮಂಜು, ಲಿಂಗದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಎನ್.ಲಿಂಗರಾಜು, ಗ್ರಾಮಸ್ಥರಾದ ಸಿದ್ದಪ್ಪ, ಪರಮೇಶ, ರಾಜಕುಮಾರ್, ಹೋಬಳಿ ಕಸಾಪ ಅಧ್ಯಕ್ಷ ತಮ್ಮಯ್ಯ, ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಆಂಡಿಗೌಡ , ಗುತ್ತಿಗೆದಾರ ಕೃಷ್ಣಪ್ಪ ಇದ್ದರು.