

ನೆಲಮಂಗಲ: ನಗರದಲ್ಲಿ ಶೀಘ್ರದಲ್ಲೇ ಗ್ರಂಥಾಲಯಕ್ಕೆ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ 38.80 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ನಿವೇಶನವನ್ನು ಬುಧವಾರ ಪರಿಶೀಲಿಸಿದರು.
ಗ್ರಂಥಾಲಯ ಇಲಾಖೆ ಉಪನಿರ್ದೇಶಕಿ ಸರೋಜಮ್ಮ ನೇತೃತ್ವದ ಅಧಿಕಾರಿಗಳ ತಂಡ ನೆಲಮಂಗಲಕ್ಕೆ ಆಗಮಿಸಿ, ನಿವೇಶನ ಪರಿಶೀಲಿಸಿತು. ನಂತರ ನಗರಸಭಾ ಆಯುಕ್ತರನ್ನು ಭೇಟಿ ಮಾಡಿ, ಗ್ರಂಥಾಲಯ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದ ವಿಚಾರ ಹಾಗೂ ಅನುದಾನದ ಮಾಹಿತಿ ನೀಡಿತು.
ನಿವೇಶನದ ದಾಖಲೆ ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಪೌರಾಯುಕ್ತ ಎಲ್. ಮಂಜುನಾಥಸ್ವಾಮಿ ಅಧಿಕಾರಿಗಳ ತಂಡಕ್ಕೆ ಭರವಸೆ ನೀಡಿದರು.
ಜಿಲ್ಲಾ ಗ್ರಂಥಾಲಯ ಅಧೀಕ್ಷಕ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸೈಯದ್ ಖಲೀಮುಲ್ಲಾ, ಪುರಸಭೆ ಮಾಜಿ ಸದಸ್ಯ ಎನ್.ಎಸ್. ಮೂರ್ತಿ, ಶಿಕ್ಷಕ ಎಂ.ಆರ್.ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.
ನಗರಸಭೆ ಹಿಂಬದಿಯಲ್ಲಿದೆ ನಿವೇಶನ: ನಗರಸಭೆ ಕಾರ್ಯಾಲಯದ ಹಿಂಭಾಗದಲ್ಲಿರುವ ಖಾತೆ ಸಂಖ್ಯೆ 1918/1611ರಲ್ಲಿರುವ ಅಂದಾಜು 38/98 ಚದರಡಿ ನಿವೇಶನವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆಂದು 2002ರಲ್ಲಿ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮಂಜೂರ ಮಾಡಲಾಗಿತ್ತು. ಈ ನಿವೇಶನವನ್ನು 2004ರಲ್ಲಿ ರಾಜ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ ಕಟ್ಟಡ ನಕ್ಷೆಗೆ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿರಲಿಲ್ಲ. ಸದ್ಯ ಈಗ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಂತಾಗಿದೆ.