ಮೂರ್ತಿ ನಿರ್ಮಾಣಕ್ಕೆ ಭೂಮಿಪೂಜೆ 16 ರಂದು

6Blh2
Published on

ಬೈಲಹೊಂಗಲ: ಪಟ್ಟಣದ ದೊಡ್ಡ ಕೆರೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ಚನ್ನಬಸವೇಶ್ವರ 21ಅಡಿ ಎತ್ತರದ ಮೂರ್ತಿ ನಿರ್ಮಾಣ ಕಾಮಗಾರಿಗೆ ಮಾ.16ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸ್ಥಳೀಯ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದ ದೊಡ್ಡಕೆರೆ ಆವರಣದಲ್ಲಿನ ಶ್ರೀ ಚನ್ನಬಸವೇಶ್ವರ ಉದ್ಯಾನವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬೈಲಹೊಂಗಲದಲ್ಲಿ ಚನ್ನಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂಬ ಈ ಭಾಗದ ಭಕ್ತರ ಬಹುದಿನಗಳ ಕನಸು ನನಸಾಗುವ ಸಮಯ ಬಂದಿದೆ. ಹೀಗಾಗಿ, ಎಲ್ಲ ಭಕ್ತರು ಸತ್ಕಾರ್ಯದಲ್ಲಿ ಭಾಗಿಯಾಗಿ ತನು, ಮನ ಹಾಗೂ ಧನದಿಂದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಚಿತ್ರನಟ ಶಿವರಂಜನ ಬೋಳನ್ನವರ ಮಾತನಾಡಿ, ಈಗಾಗಲೇ ಪುರಸಭೆ ವತಿಯಿಂದ ದೊಡ್ಡ ಕೆರೆ ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಕೆರೆ ಆವರಣದಲ್ಲಿ 21 ಅಡಿ ಎತ್ತರದ ಚನ್ನಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಶಾಸಕ ಮಹಾಂತೇಶ ಕೌಜಲಗಿ ಅವರು ಪುರಸಭೆ ವತಿಯಿಂದ ಮೂರ್ತಿ ಪ್ರತಿಷ್ಠಾಪಿಸಲು ಪಿಲ್ಲರ್ ನಿರ್ಮಿಸಿದ್ದಾರೆ. ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು.

ಸದಾಶಿವಯ್ಯ ಪತ್ರಿಮಠ, ಮುಖಂಡರಾದ ಪಾಂಡಪ್ಪ ಇಂಚಲ, ಬಿ.ಬಿ.ಗಣಾಚಾರಿ, ಶ್ರೀಶೈಲ ಯಡಳ್ಳಿ, ಮಹಾಂತೇಶ ಕಳ್ಳಿಬಡ್ಡಿ, ಶಂಕರ ಬೋಳನ್ನವರ, ಉಳವಪ್ಪ ಬಡ್ಡಿಮನಿ, ಸೋಮಪ್ಪ ವಾಲಿ, ಬಸವರಾಜ ಭರಮಣ್ಣವರ, ಶ್ರೀಕಾಂತ ಮತ್ತಿಕೊಪ್ಪ, ಅಜ್ಜಪ್ಪ ಬಡ್ಡಿಮನಿ, ಅದೃಶ್ಯ ಹುಚ್ಚನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net