

ಜಗಳೂರು: ಪುಣ್ಯದ ಕೆಲಸ ಮಾಡುವಾಗ ಶುಭ-ಅಶುಭ ಎನ್ನುವ ಸಮಯ ಇರುವುದಿಲ್ಲ. ಭಗವಂತನನ್ನು ಅರಿತಾಗ ಅರಿವಿನ ಜ್ಞಾನ ಉಂಟಾಗುತ್ತದೆ ಎಂದು ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.
ತಾಲೂಕಿನ ದೊಣೆಹಳ್ಳಿ ಗ್ರಾಮದ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಸೋಮವಾರ ದೇವಸ್ಥಾನ, ಮಹಾದ್ವಾರ, ಕಲ್ಯಾಣಿ ನಿರ್ಮಾಣ ಹಾಗೂ ಮಠದ ಪ್ರಾಂಗಣದ ನವೀಕರಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಠ-ಮಾನ್ಯಗಳಿಂದ ಸಾಮಾಜಿಕ ಕಾರ್ಯ ಹಾಗೂ ಅಕ್ಷರ ದಾಸೋಹ ನಡೆಯಬೇಕು. ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಬೇಕು. ಇಂತಹ ಕಾರ್ಯವನ್ನು ಶರಣಬಸವೇಶ್ವರ ದಾಸೋಹ ಮಠ ಈಗಾಗಲೇ ಮಾಡಿಕೊಂಡು ಬಂದಿದೆ ಎಂದರು.
ದೊಣೆಹಳ್ಳಿ ಸಾಕಷ್ಟು ಇತಿಹಾಸ ಹೊಂದಿದೆ. ಸಿದ್ಧಿಪುರುಷರು, ಸಾಧಕರು ಹುಟ್ಟಿ ಬೆಳೆದಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡುವ ಉತ್ಸಾಹಿ ಭಕ್ತರಿದ್ದಾರೆ. ಮಠ ಮತ್ತು ದೇವಸ್ಥಾನ ಕಟ್ಟಲು ಕಷ್ಟವಾಗುವುದಿಲ್ಲ ಅನಿಸುತ್ತದೆ, ಎಲ್ಲರೂ ಮನಸ್ಸು ಮಾಡಿದರೆ ಒಂದು ವರ್ಷದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಬಹುದು. ಆದರೆ, ಕೆಲಸವನ್ನು ನಾಳೆ ಮಾಡೋಣ ಎಂಬ ಮನೋಭಾವ ಬಿಟ್ಟು ಅಂದಿನ ಕೆಲಸ ಅಂದೇ ಮಾಡಿದರೆ ಸಾಧಿಸಲು ಕಷ್ಟವಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾನಾಮಡುಗು ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ಮಾತನಾಡಿ, ಮಠಗಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಶಯ ಮಠಾಧೀಶರದಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನದಾಸೋಹದ ಜತೆಗೆ ಸಮಾಜ ಸೇವೆ ಮಾಡುತ್ತ ಬಂದಿದ್ದೇವೆ ಎಂದರು.
ದೊಣೆಹಳ್ಳಿಯಲ್ಲಿ ಮೂಲ ಮಠವಿದ್ದು, ಈಗ ಹೊಸ ದೇವಸ್ಥಾನ ನಿರ್ಮಾಣದಿಂದ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಲಾಗುವುದು. ಈ ಮಠವು ದಾನಿಗಳಿಂದಲೇ ನಡೆದುಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲೂ ಭಕ್ತರ ಸಹಕಾರ ಬೇಕು ಎಂದು ಹೇಳಿದರು.
ಶರಣಬಸವೇಶ್ವರ ಮಠದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಶರಣಬಸವೇಶ್ವರ ದಾಸೋಹ ಮಠ ಬೇರೆ ಮಠಗಳಿಗೆ ಹೊಲಿಕೆ ಮಾಡಿದರೆ ವಿಶೇಷ ಚರಿತ್ರೆ ಹೊಂದಿದೆ. ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ದ್ವಾರ ಬಾಗಿಲು ಆಗಿರುವ ದೊಣೆಹಳ್ಳಿಯಲ್ಲಿ ಶ್ರೀ ಮಠದ ಮೂಲ ನೆಲೆ ಇದ್ದು ಇದನ್ನ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಲಾಗಿದೆ. ಅದಕ್ಕೆ ನಮ್ಮಿಂದಲೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ತಾಪಂ ಮಾಜಿ ಸದಸ್ಯ ಹನುಮಂತಾಪುರ ಚಿತ್ತಪ್ಪ, ವರ್ತಕರಾದ ಕಿತ್ತೂರು ಜಯಣ್ಣ್ಣ ಮತ್ತಿತರಿದ್ದರು.