

ಮೈಸೂರು: ನಗರ ಪಾಲಿಕೆ ಕೌನ್ಸಿಲ್, ಕ್ಯಾಬಿನೆಟ್ ಅನುಮೋದನೆ ಹಾಗೂ ರಸ್ತೆ ಸುರಕ್ಷತೆ ಮಾನದಂಡಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಗನ್‌ಹೌಸ್ ವೃತ್ತದಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಮಟ್ಟದ ಸಮಿತಿ ಅನುಮೋ ದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ, ವೃತ್ತಗಳಲ್ಲಿ ಯಾವುದೇ ಪ್ರತಿಮೆ ನಿರ್ಮಾಣ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಇದೆ. ಈ ಮಾರ್ಗಸೂಚಿಗೆ ಅನುಗುಣವಾಗಿ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಗನ್‌ಹೌಸ್ ವೃತ್ತದಲ್ಲಿ 5 ಕಡೆಯಿಂದ ರಸ್ತೆಗಳು ಬಂದು ಸೇರುವ ಹಿನ್ನೆಲೆಯಲ್ಲಿ ಅಲ್ಲಿ ವೃತ್ತದ ಅವಶ್ಯಕತೆ ಇದೆ. ಅಲ್ಲಿ ವೃತ್ತ, ಪ್ರತಿಮೆ ನಿರ್ಮಾಣ ಮಾಡುವುದರಿಂದ ರಸ್ತೆ ಸುರಕ್ಷತೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ವೃತ್ತ ಹಾಗೂ ಪ್ರತಿಮೆ ಅನಧಿಕೃತವಾಗಿ ನಿರ್ಮಾಣವಾಗುತ್ತಿಲ್ಲ. ನಗರ ಪಾಲಿಕೆ ಕೌನ್ಸಿಲ್, ಕ್ಯಾಬಿನೆಟ್ ಅನುಮೋದನೆ ಪಡೆದು ನಂತರ ಹೈಕೋರ್ಟ್‌ನಲ್ಲಿ ಸರ್ಕಾರವೇ ರಿಟ್ ಅಪೀಲ್ ಹಾಕಿ ಅನುಮತಿ ಪಡೆಯಲಾಗಿದೆ. ಎಲ್ಲ ಕಾನೂನು ಅಂಶಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ವೃತ್ತಗಳನ್ನು ಸರ್ಕಾರ ಅಥವಾ ಸಂಘ ಸಂಸ್ಥೆಗಳು ನಿರ್ಮಾಣ ಮಾಡಲು ಅವಕಾಶವಿದೆ. ವೃತ್ತ ನಿರ್ಮಾಣಕ್ಕೆ ಯಾರಾದರು ಮುಂದೆ ಬಂದರೆ ಅವರಿಗೆ ಜವಾಬ್ದಾರಿ ವಹಿಸಲು ಕಾನೂನಿನಲ್ಲಿ ಅವಕಾಶವಿದ್ದು, ಗನ್‌ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ ವೃತ್ತದ ಕಾಮಗಾರಿ ಜಿಲ್ಲಾಡಳಿತ ಗಮನಕ್ಕೆ ಬಂದಿದೆ. ಅಲ್ಲಿ ಯಾವುದೇ ರೀತಿಯ ಅನಧಿಕೃತ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.