ಶ್ರೀಘ್ರ ಟೌನ್​ಶಿಪ್​ ನಿರ್ಮಾಣ

FotoJet
Published on

ಬಂಗಾರಪೇಟೆ: ದಾಸರಹೊಸಹಳ್ಳಿ ಬಳಿ 700 ಎಕರೆಯಲ್ಲಿ ಇಂಡಸ್ಟ್ರೀಯಲ್​ ಏರಿಯಾ ಮತ್ತು 300 ಎಕರೆ ಪ್ರದೇಶದಲ್ಲಿ ಟೌನ್​ಶಿಪ್​ ನಿರ್ಮಿಸಲಾಗುತ್ತಿದ್ದು, 25 ಸಾವಿರ ಜನರಿಗೆ ಉದ್ಯೋಗ ನೀಡುವುದರ ಜತೆಗೆ ಬಂಗಾರಪೇಟೆಯನ್ನು ಪ್ರಮುಖ ವಾಣಿಜ್ಯ ನಗರವನ್ನಾಗಿ ಮಾಡಲು ಮುಂದಾಗಿದ್ದೇವೆ ಎಂದು ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ತಿಳಿಸಿದರು.

ಪುರಸಭೆ ಕಚೇರಿ ಬಳಿ ಶುಕ್ರವಾರ 60 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಅನೇಕ ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಕನ್ನಡ ಭವನ, ಪತ್ರಕರ್ತರ ಭವನ, ರಂಗಮಂದಿರ, ಸರ್ಕಾರಿ ನೌಕರರ ಸಂಘದ ಕಚೇರಿ, ಶಿಕ್ಷಕರ ಭವನ, ನೂತನ ಬಸ್​ ನಿಲ್ದಾಣ, ಸಿಸಿ ರಸ್ತೆಗಳು, 20 ಹೈಮಾಸ್ಟ್​ ದೀಪಗಳು, ಅಲ್ಪಸಂಖ್ಯಾತರ ಕಾಲನಿಗಳಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ನಿಮಾರ್ಣ, 7.5ಕೋಟಿ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಗಳ ಸುಂದರೀಕರಣ, ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಸೇರಿ ಹಲವು ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿ, ಪ್ರತಿ ಗ್ರಾಮಕ್ಕೆ 3 ಬೋರ್​ವೆಲ್​ ಕೊರೆಸಿ ನೀರಿನ ಭವಣೆ ನೀಗಿಸಲಾಗಿದೆ. ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಪೂರೈಸಲು ಯರಗೋಳ್​ ಡ್ಯಾಂನ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ನೀರು ಪೂರೈಸಬೇಕಿದ್ದು 22 ಕೋಟಿ ರೂ. ವೆಚ್ಚದಲ್ಲಿ ಪೈಪ್​ಲೈನ್​ ಅಳವಡಿಸಿ ಮನೆಮನೆಗೂ ಫಿಲ್ಟರ್​ ನೀರು ಪೂರೈಸುವುದರ ಜತೆಗೆ ಮುಂದಿನ 6 ತಿಂಗಳ ಒಳಗೆ ಪಟ್ಟಣದಲ್ಲಿ ಸಂಪೂರ್ಣ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗುತ್ತದೆ ಎಂದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಇಒ ಕಚೇರಿ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಸೇರಿ ಸ್ವಂತ ಕಟ್ಟಡವಿಲ್ಲದ ಸರ್ಕಾರಿ ಕಚೇರಿಗಳಿಗೆ ಅನುದಾನ ತಂದು ಸ್ವಂತ ಕಟ್ಟಡ ನಿರ್ಮಿಸಲಾಗುತ್ತದೆ. ಅಪರಾಧ ಚಟಿವಟಿಕೆ ತಡೆಗೆ ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಮಾತೆತ್ತಿದರೆ ಎಸ್​ಎನ್​ ಸಿಟಿ, ಗಾಲ್ಫ್​ ಎಂದು ಹೇಳುತ್ತಿದ್ದರು. 5 ವರ್ಷ ಅವರದೇ ಡಬಲ್​ ಇಂಜಿನ್​ ಸರ್ಕಾರ ಇತು.್ತ ಅಕ್ರಮ ನಡೆದಿದ್ದರೆ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು. ಯಾರದೊ ಇಬ್ಬರ ಮಾತು ಕೇಳಿ ಆತ್ಮೀಯ ಚಂದ್ರಾರೆಡ್ಡಿ ಬಿಜೆಪಿಗೆ ಸೇರ್ಪಡೆಗೊಂಡರು. ತಿಂಗಳ ಒಳಗೆ ಸಮಾವೇಶ ಮಾಡಿ ಚಂದ್ರರೆಡ್ಡಿ ಸೇರಿ ಬಿಜೆಪಿ ಹಾಗೂ ಜೆಡಿಎಸ್​ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಎಂ.ಆರ್​ ರವಿ ಮಾತನಾಡಿ, ಯಾವುದೇ ಕ್ಷೇತ್ರ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ನಾಯಕರು ಬದ್ಧತೆ ಇಟ್ಟುಕೊಂಡಿರಬೇಕು. ಶಾಸಕರು 60 ಕೋಟಿ ರೂ. ಅನುದಾನದಲ್ಲಿ ಪಟ್ಟಣದ ಅಭಿವೃದ್ಧಿ ಮಾಡುತ್ತಿದ್ದಾರೆ. ನನ್ನ ಮೇಲೂ ಸಹ ಜಿಲ್ಲೆಯ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದನ್ನು ಹುಸಿಯಾಗದಂತೆ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದರು.

ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಶಾಸಕರ ಶ್ರಮಕ್ಕೆ ಸಾರ್ಥಕತೆ ನೀಡಿದಂತಾಗುತ್ತದೆ. ಜತೆಗೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅನುಷ್ಠಾನ ಅಧಿಕಾರಿಗಳಿಗೆ ತಿಳಿಸಿದರು.

ಮಾಜಿ ಪೌರಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಪಕ್ಷಾತಿತವಾಗಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಎಲ್ಲರೂ ಒತ್ತಡ ತರಬೇಕು ಎಂದು ಕರೆ ನೀಡಿದರು. ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ಶ್ರಮವನ್ನು ಪ್ರತಿಯೊಬ್ಬರೂ ಶ್ಲಾಘಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net