ಪ್ರಭಾವಿಗಳಿಂದ ಅರಣ್ಯದಲ್ಲಿ ರೆಸಾರ್ಟ್, ಹೋಂಸ್ಟೇ ನಿರ್ಮಾಣ: ಆರೋಪ

Published on

ಮೈಸೂರು: ಎಚ್.ಡಿ.ಕೋಟೆ, ಸರಗೂರು ಅರಣ್ಯ ಭಾಗದಲ್ಲಿ ಅಂದಾಜು 28 ರೆಸಾರ್ಟ್, ಹೋಂಸ್ಟೇಗಳನ್ನು ಪ್ರಭಾವಿಗಳು ನಿರ್ಮಿಸಿಕೊಂಡಿದ್ದಾರೆ ಎಂದು ಸೇವ್ ಕಬಿನಿ ಸದಸ್ಯರಾದ ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದರು.

ರೆಸಾರ್ಟ್, ಹೋಂ ಸ್ಟೇ ಚಟುವಟಿಕೆಯಿಂದ ವಿಚಲಿತವಾಗಿ ಕಾಡು ಪ್ರಾಣಿಗಳು ಹೊರಬರುತ್ತಿವೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಂಬಂಧಿತ ಅಧಿಕಾರಿಗಳು ಅವುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ನಿರ್ಮಾಣದಿಂದ ಪರಿಸರ ಸೂಕ್ಷ್ಮ ವಲಯಕ್ಕೂ ಅಪಾಯ ಎದುರಾಗಿದೆ. ಇದರ ಬಗ್ಗೆ ಈಗಾಗಲೇ ಸಂಬಂಧಿಸಿದವರಿಗೆ ದೂರು ನೀಡಿದ್ದೇವೆ. ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಮಾನವ-ಪ್ರಾಣಿ ಸಂಘರ್ಷದಿಂದ ಇಬ್ಬರು ಬಲಿಯಾಗಿ, ಒಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಂತಹ ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿ ಅಕ್ರಮ, ಸಕ್ರಮ ಎಂಬ ಪ್ರಶ್ನೆಯಿಲ್ಲ. ಕಾಡಿನೊಳಗೆ ಯಾವುದೇ ರೆಸಾರ್ಟ್, ಹೋಂ ಸ್ಟೇ ನಿರ್ಮಾಣ ಮಾಡುವುದನ್ನು ತಡೆಯಬೇಕು ಎಂದರು.

ಸರಗೂರು, ಎಚ್.ಡಿ.ಕೋಟೆ ಅರಣ್ಯ, ಕಬಿನಿ ನದಿ ಭಾಗದ ಹುಲಿ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್‌ಗಳಲ್ಲಿ ಹೋಂ ಸ್ಟೇ, ರೆಸಾರ್ಟ್, ಸ್ಟಾರ್ ಹೋಟೆಲ್, ವಾಟರ್ ಸ್ಪೋರ್ಟ್ಸ್, ಕ್ಲಬ್, ಬಾರ್, ರೆಸ್ಟೋರೆಂಟ್, ಬೋಟ್ ವಿಹಾರ, ಸಫಾರಿ ಮೊದಲಾದವು ನಡೆಯುತ್ತಿವೆ ಎಂದು ಆರೋಪಿಸಿದರು.

ಅರಣ್ಯ ಇಲಾಖೆಯಿಂದ ಸಫಾರಿಯ ಸುಮಾರು 25 ವಾಹನಗಳು ಸಂಚರಿಸುತ್ತಿವೆ. ರೆಸಾರ್ಟ್‌ನವರು ಸುಮಾರು 20 ವಾಹನಗಳಲ್ಲಿ ಬೆಳಗ್ಗೆ ಕಾಡು ಪ್ರವೇಶಿಸಿದರೆ ರಾತ್ರಿ 7 ಗಂಟೆಯಾದರೂ ಹೊರ ಬರುವುದಿಲ್ಲ. ಇದರಿಂದಾಗಿ ಕಾಡು ಪ್ರಾಣಿಗಳು ವಿಚಲಿತವಾಗಿ ನಾಡಿನತ್ತ ಆಗಮಿಸಿ, ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಿದೆ ಎಂದರು.

ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದರ ಶಬ್ದಕ್ಕೆ ಕಾಡು ಪ್ರಾಣಿಗಳು ಹೆದರಿ ಹೊರಬರುತ್ತಿವೆ. ಇದರಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರ ನಟರು ಕಾಡಿನೊಳಗಿನ ಮೋಜು, ಮಸ್ತಿಗೆ ಪ್ರಚಾರ ನೀಡುತ್ತಿರುವುದು ಬೇಸರದ ಸಂಗತಿ ಎಂದರು.

ವಕೀಲ ವಿ.ರವಿಕುಮಾರ್ ಮಾತನಾಡಿ, ಅರಣ್ಯದಲ್ಲಿ ಮಾನವ ಚಟುವಟಿಕೆ ವಿರುದ್ಧ ದಾಖಲೆ ಸಂಗ್ರಹಿಸಿ ಕಳೆದ ಮಾರ್ಚ್ ತಿಂಗಳಿನಿಂದಲೂ ಹೋರಾಟ ನಡೆಸುತ್ತಿದ್ದೇವೆ. ಆದರೂ ಯಾರೂ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ನೀರಾವರಿ ಇಲಾಖೆ, ಪೊಲೀಸರು ತಮಗೂ, ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿಕೊಂಡಿರುವವರು ದೊಡ್ಡ ವ್ಯಕ್ತಿಗಳಾಗಿರುವುದು ಇದಕ್ಕೆ ಕಾರಣ. ಹೀಗಾಗಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಈಗ ಸುಮಾರು 28 ಅಕ್ರಮ ಕಟ್ಟಡ, ಚಟುವಟಿಕೆ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಅನುಮತಿ ಪಡೆದಿರುವುದಾಗಿ ಹೇಳಿಕೊಂಡು ಚಟುವಟಿಕೆ ನಡೆಸುತ್ತಿರುವವರ ಸಹ ಅಸಂಖ್ಯ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ಬೇಸರಿಸಿದರು. ಸೇವ್ ಕಬಿನಿ ಸದಸ್ಯರಾದ ಮಧು ಎನ್.ಯಡಿಯಾಲ, ಕರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net