

ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮನ ಮೂರ್ತಿಗಾಗಿ ಬಳಕೆ ಮಾಡಿರುವ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇಡೀ ದೇಶದ ಜನರು ನೋಡುತ್ತಿರುವ ಬಾಲರಾಮನ ವಿಗ್ರಹ ಕೆತ್ತನೆಗಾಗಿ ಬಳಸಿರುವ ಕೃಷ್ಣ ಶಿಲೆಯು ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿರುವುದು ಸಂತೋಷದ ಸಂಗತಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಾಲರಾಮನ ಮೂರ್ತಿಯ ಶಿಲೆ ಸಿಕ್ಕಿದೆ. ಹೀಗಾಗಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ನಾವು ಭೂಮಿಪೂಜೆ ಮಾಡುತ್ತೇವೆ. ಅಂದು ಬೆಳಗ್ಗೆ 6ರಿಂದ 8ರವರೆಗೆ ಭೂಮಿಪೂಜೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಸೇರಿಸಿ ಕೃಷ್ಣಶಿಲೆ ದೊರೆತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.