

ಮೈಸೂರು: ನಾವೆಲ್ಲ ಅತ್ಯಂತ ಪುಣ್ಯವಂತರು, 500 ವರ್ಷಗಳ ಹೋರಾಟದ ಫಲವಾಗಿ ಇದೀಗ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಗೊಳ್ಳುತ್ತಿದ್ದು, ನಮಗೆಲ್ಲರಿಗೂ ರಾಮಮಂದಿರ ನೋಡುವ ಸೌಭಾಗ್ಯ ದೊರೆತ್ತಿದೆ ಎಂದು ಆಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ಗಿರಿ ಮಹಾರಾಜ್ ಹೇಳಿದರು.
ನಗರದ ಸರಸ್ವತಿಪುರಂನ ಶ್ರೀಕೃಷ್ಣ ಧಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಮಮಂದಿರ ನಿರ್ಮಾಣ ಮಾಡಿದ ಮಾತ್ರಕ್ಕೆ ಶ್ರೀರಾಮನ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಭಾರತ ಅಖಂಡವಾ ಗಬೇಕು, ಹಿಂದುಗಳಿಗೆ ರಕ್ಷಣೆ ದೊರೆಯಬೇಕು ಹಾಗೂ ‘ನಾನೊಬ್ಬ ಹಿಂದು’ ಎಂದು ಹಿಂದುಗಳು ಅಭಿಮಾನದಿಂದ ಹೇಳಿಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು. ಈ ಕಾರ್ಯಗಳು ಪೂರ್ಣಗೊಂಡರೆ ಮಾತ್ರ ಶ್ರೀರಾಮನ ಕಾರ್ಯ ಪೂರ್ಣಗೊಂಡ ಹಾಗೆ. ಅಲ್ಲಿಯವರೆಗೆ ನಾವೆಲ್ಲರು ವಿಶ್ರಮಿಸಬಾರದು ಎಂದರು.
ದೇಶದ ಇತಿಹಾಸ ಹಲವು ಸಂಘರ್ಷಗಳಿಂದ ಕೂಡಿದೆ. ಸಂಘರ್ಷದ ಮೂಲಕವೇ ಭಾರತ ಪ್ರತಿ ಹಂತದಲ್ಲೂ ಗೆಲುವು ಸಾಧಿಸುತ್ತಾ ಬಂದಿದೆ. ರಾಮಜನ್ಮಭೂಮಿಯನ್ನು ಪಡೆಯಲು ಸುದೀರ್ಘ ಸಂಘರ್ಷ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಸುದೀರ್ಘ ಹೋರಾಟದ ನಂತರ ಇದೀಗ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.
ಚಂದ್ರಯಾನ ಯಶಸ್ವಿಗೊಂಡ ನಂತರ ಇಂದು ವಿಶ್ವವೇ ಭಾರತವನ್ನು ತದೇಕಚಿತ್ತದಿಂದ ನೋಡುತ್ತಿದೆ. ಭಾರತವನ್ನು ಹಿಂದುಳಿದ ರಾಷ್ಟ್ರ, ದರಿದ್ರ ರಾಷ್ಟ್ರ ಎಂದು ವಿದೇಶಿಯರು ಕರೆಯುತ್ತಿದ್ದರು. ದೇಶವನ್ನು ನಾಶ ಮಾಡಲು ಇಲ್ಲಿನ ಶಿಕ್ಷಣ ಪದ್ಧತಿಯನ್ನು ನಾಶ ಮಾಡಲಾಯಿತು. ಇಷ್ಟೆಲ್ಲ ಸಂಕಷ್ಟದ ಹಾದಿಯ ನಡುವೆಯೂ ಇಂದು ಭಾರತ ವಿಶ್ವ ಗುರುವಿನ ಸ್ಥಾನದಲ್ಲಿ ಬಂದು ನಿಂತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
‘ನನಗೆ ಕ್ರೈಸ್ತರು, ಮುಸ್ಲಿಮರ ಬಗ್ಗೆ ಹೆದರಿಕೆ ಇಲ್ಲ, ಹೆದರಿಕೆ ಇರುವುದು ಹಿಂದುಗಳ ಬಗ್ಗೆ’ ಎಂದು ಸ್ವಾತಂತ್ರೃ ಹೋರಾಟಗಾರ ವೀರ ಸಾರ್ವಕರ್ ಹೇಳಿದ್ದರು. ಅವರ ಮಾತು ಅಕ್ಷರಶಃ ಸತ್ಯ. ಹಿಂದುಗಳಿಗೆ ಹಿಂದುಗಳೇ ಶತ್ರುಗಳಾಗುತ್ತಿದ್ದು, ಇದು ದೇಶದ ದೊಡ್ಡ ಸಮಸ್ಯೆಯಾಗಿದೆ. ಜಾತಿ, ಭಾಷೆಯನ್ನು ಮೀರಿ ಹಿಂದುಗಳು ಒಂದಾಗಬೇಕು. ಭಾರತವನ್ನು ಸದೃಢಗೊಳಿಸಬೇಕಾದರೆ ಮೊದಲು ಹಿಂದುಗಳನ್ನು ಸದೃಢಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ದೇಶವನ್ನು ವಿಭಜಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಶಕ್ತಿಗಳು ಸಂಚು ರೂಪಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ದೇಶ ರಕ್ಷಿಸುವ ಹೊಣೆಗಾರಿಕೆಯನ್ನು ಎಲ್ಲರು ಹೊರಬೇಕು. ಆ ಮೂಲಕ ಸದೃಢ ಭಾರತ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ನಿರ್ಮಾಣಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿಯೇ ಭಾರತ ಯಶಸ್ವಿಯಾಗಿ ಚಂದ್ರಯಾನ ಕೈಗೊಂಡಿದೆ. ಶ್ರೀರಾಮ ಕೇವಲ ಶ್ರೀರಾಮನಲ್ಲ, ಆತ ಶ್ರೀರಾಮಚಂದ್ರ. ರಾಮನಕೀರ್ತಿಯನ್ನು ಚಂದ್ರಯಾನ ಮೂಲಕ ಚಂದ್ರಲೋಕಕ್ಕೂ ಕೊಂಡೊಯ್ದ್ದಿದ್ದೇವೆ. ಶ್ರೀರಾಮ ಸೂರ್ಯವಂಶದ ರಾಜನಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸೂರ್ಯನ ಬಳಿಗೂ ತೆರಳುತ್ತೇವೆ ಎಂದರು.
ಅಯೋಧ್ಯೆಯಲ್ಲಿ ಕೇವಲ ಶ್ರೀರಾಮಮಂದಿರ ನಿರ್ಮಾಣವಾದರೆ ಸಾಲದು. ಈ ಭೂಮಿ ಇರುವವರೆಗೂ ಶ್ರೀರಾಮಂದಿರ ಇರಬೇಕು ಎಂದಾದರೆ ಎಲ್ಲರ ಹೃದಯದಲ್ಲೂ ರಾಮಮಂದಿರ ನಿರ್ಮಾಣ ಆಗಬೇಕು. ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಹಾಗೂ ರಾಮಭಕ್ತಿ ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವಿದ್ವಾಂಸ ಕೊಲ್ಲಾಪುರ ಪವಮಾನ ಆಚಾರ್, ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್, ಜಿಲ್ಲಾಧ್ಯಕ್ಷ ಬಿ.ಎಸ್. ಪ್ರಶಾಂತ್, ಚಾತುರ್ಮಾಸ್ಯ ಆಚಾರಣಾ ಸಮಿತಿ ಕಾರ್ಯದರ್ಶಿ ರವಿಶಾಸ್ತ್ರಿ ಹಾಗೂ ಇತರರು ಇದ್ದರು.
ರಾಮಮಂದಿರ ಬಗ್ಗೆ ಸಮಾಲೋಚನೆ
ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಖಜಾಂಚಿ ಗೋವಿಂದ ಗಿರಿ ಮಹಾರಾಜ್ ಮಂಗಳವಾರ ನಗರದ ಸರಸ್ವತಿಪುರಂನ ಶ್ರೀಕೃಷ್ಣಧಾಮಕ್ಕೆ ಭೇಟಿ ನೀಡಿ ಚಾತುರ್ಮಾಸ್ಯ ವ್ರತದಲ್ಲಿರುವ ಟ್ರಸ್ಟ್‌ನ ವಿಶ್ವಸ್ಥರಾದ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಅವರೊಂದಿಗೆ ರಾಮಮಂದಿರ ನಿರ್ಮಾಣ ವಿಚಾರವಾಗಿ ಸಮಾಲೋಚನೆ ನಡೆಸಿದರು. ಬಳಿಕ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು.