ರಟ್ಟಿಹಳ್ಳಿಯಲ್ಲಿ ಪ್ರಜಾಸೌಧ ನಿರ್ಮಾಣ

RTL PRAJA SOUDHA
Published on

ರಟ್ಟಿಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ 2017ರಲ್ಲಿ ರಟ್ಟಿಹಳ್ಳಿ ತಾಲೂಕು ಕೇಂದ್ರ ಘೊಷಣೆ ಬಳಿಕ ಸ್ಥಳೀಯ ತುಂಗಾ ಮೇಲ್ದಂಡೆ ಇಲಾಖೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಟ್ಟಿಹಳ್ಳಿ ತಾಲೂಕು ಕೇಂದ್ರಕ್ಕೆ ನೂತನ ಪ್ರಜಾಸೌಧ ಕಟ್ಟಡ ನಿರ್ವಿುಸಬೇಕೆಂದು ಶಾಸಕ ಯು.ಬಿ. ಬಣಕಾರ ಮಾಡಿದ್ದ ಮನವಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಸರ್ಕಾರದ ಆದೇಶದಂತೆ ಪ್ರಜಾಸೌಧ ನಿರ್ವಣಕ್ಕೆ ಜಿಲ್ಲಾಧಿಕಾರಿ, ಹಾವೇರಿ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಮತ್ತು ತಹಸೀಲ್ದಾರ್ ಸ್ಥಳ ಪರಿಶೀಲಿಸಿದ್ದು, ಶೀಘ್ರದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

8.60 ಕೋಟಿ ರೂ. ವೆಚ್ಚದಲ್ಲಿ ನಿರ್ವಣ: ಪ್ರಜಾಸೌಧ ತಾಲೂಕು ಆಡಳಿತ ಕೇಂದ್ರದ ಕಟ್ಟಡದಲ್ಲಿ ನೆಲಮಹಡಿಯನ್ನು ಪೂರ್ಣ ಪ್ರಮಾಣದಲ್ಲಿ, ಮೊದಲ ಮಹಡಿಯ ಅರ್ಧ ಭಾಗದಲ್ಲಿ ಕಟ್ಟಡ ನಿರ್ವಿುಸಲು ಹಾಗೂ ಬೇರೆ ಕಚೇರಿಗಳು ಮಂಜೂರಾದ ಸಂದರ್ಭದಲ್ಲಿ ಮೊದಲನೇ ಮಹಡಿಯ ಉಳಿಕೆ ಜಾಗದಲ್ಲಿ ಕಚೇರಿ ನಿರ್ವಿುಸಲು ಅವಕಾಶ ಕಲ್ಪಿಸಲಾಗುವುದು. ಈ ಕಟ್ಟಡವನ್ನು ಟೈಪ್ ಎ ಮಾದರಿಯಲ್ಲಿ 8.60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆ ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ಪಡೆಯುವಂತೆ ಆದೇಶ ನೀಡಲಾಗಿದೆ. ಪಟ್ಟಣದ ಹಿರೇಕೆರೂರು ರಸ್ತೆಯ ಜನತಾ ಪ್ಲಾಟ್ ಕ್ರಾಸ್ ಬಳಿಯ ಸರ್ವೆ ನಂ. 87ರಲ್ಲಿ ಕಂದಾಯ ಇಲಾಖೆಗೆ ಕಾಯ್ದಿರಿಸಿದ ಒಟ್ಟು 7 ಎಕರೆ ಜಾಗದಲ್ಲಿ ಒಂದೂವರೆ ಎಕರೆಯಲ್ಲಿ ಪ್ರಜಾಸೌಧ ನಿರ್ವಿುಸಲು ಜಾಗ ಅಂತಿಮಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮತ್ತು ಹಾವೇರಿ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು, ತಹಸೀಲ್ದಾರ್ ಕೆ. ಗುರುಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಜಾಗ ಪರಿಶೀಲಿಸಿದ್ದಾರೆ. ಜಿಲ್ಲಾ ರಸ್ತೆಯ ಮಧ್ಯ ಭಾಗದಿಂದ 25 ಮೀಟರ್ ಅಂತರದಲ್ಲಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನ ರ್ಪಾಂಗ್ ಸೌಲಭ್ಯದೊಂದಿಗೆ ಕಟ್ಟಡ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಜಾಸೌಧ ನಿರ್ವಣಕ್ಕೆ ಉದ್ದೇಶಿಸಲಾದ ಕಂದಾಯ ಇಲಾಖೆಯ ಜಾಗ ಪ್ರಸ್ತುತ ಪಟ್ಟಣದಿಂದ 3 ಕಿ.ಮೀ ಅಂತರದಲ್ಲಿದೆ.

ಕಂದಾಯ ಸಚಿವ ಭರವಸೆ

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಯು.ಬಿ. ಬಣಕಾರ ಸರ್ಕಾರಕ್ಕೆ ನೂತನ ರಟ್ಟಿಹಳ್ಳಿ ತಾಲೂಕಿಗೆ ಅವಶ್ಯಕತೆ ಇರುವ ಪ್ರಜಾಸೌಧ ಕಟ್ಟಡ ನಿರ್ವಿುಸಬೇಕೆಂದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ ರಟ್ಟಿಹಳ್ಳಿಗೆ ಹೊಸ ತಾಲೂಕು ಆಡಳಿತ ಕೇಂದ್ರ ಕಟ್ಟಡ ನಿರ್ವಣಕ್ಕೆ ಭರವಸೆ ನೀಡಿದ್ದಾರೆ.

ಸರ್ಕಾರ ಹೊಸದಾಗಿ 24 ತಾಲೂಕು ಕೇಂದ್ರಗಳಲ್ಲಿ ಪ್ರಜಾಸೌಧ ನಿರ್ವಣಕ್ಕೆ ಪಟ್ಟಿ ತಯಾರಿಸಿತ್ತು. ಪಟ್ಟಿಯಲ್ಲಿರುವ ಕೆಲ ತಾಲೂಕು ಕೇಂದ್ರಗಳಲ್ಲಿ ಜಾಗದ ಕೊರತೆ ಇರುವುದರಿಂದ ಕೆಲ ಬದಲಾವಣೆ ಮಾಡಲಾಗಿದೆ. ರಟ್ಟಿಹಳ್ಳಿ ಪ್ರಜಾಸೌಧ ನಿರ್ವಣಕ್ಕೆ ಪಟ್ಟಣದಲ್ಲಿ ಈಗಾಗಲೇ ಇರುವ ಜಾಗದ ಬಗ್ಗೆ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ದಾಖಲಾತಿ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಶೀಘ್ರವೇ ಗೃಹ ಮಂಡಳಿಯಿಂದ ಕಟ್ಟಡದ ನೀಲಿ ನಕ್ಷೆಯ ವರದಿ ಸಲ್ಲಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. | ಯು.ಬಿ. ಬಣಕಾರ ಶಾಸಕ, ಹಿರೇಕೆರೂರು-ರಟ್ಟಿಹಳ್ಳಿ ಸರ್ಕಾರದ ಆದೇಶದಂತೆ ರಟ್ಟಿಹಳ್ಳಿ ಪ್ರಜಾಸೌಧ ನಿರ್ವಣಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಗೃಹ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಜಾಗ ಅಂತಿಮಗೊಳಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಕಟ್ಟಡ ಕಾಮಗಾರಿ ನಡೆಸಲಾಗುವುದು. | ಕೆ. ಗುರುಬಸವರಾಜ ತಹಸೀಲ್ದಾರ್ ರಟ್ಟಿಹಳ್ಳಿ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net