ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಚಾಲನೆ

Mla mantar gowda.2
Published on

ಶನಿವಾರಸಂತೆ: ಸರ್ಕಾರ ವಸತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸೂಚಿಸಿದರು.

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸಮೀಪದ ಬ್ಯಾಡಗೋಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 7 ಕೋಟಿ ರೂ. ವೆಚ್ಚದ ನೂತನ ವಸತಿ ವಿಜ್ಞಾನ ಪಿಯು ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇರೆ ಜಿಲ್ಲೆಗಳಿಗಿಂತ ಕೊಡಗಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ವಸತಿ ಶಾಲೆಯಲ್ಲಿ ಪದವಿಪೂರ್ವ ಕಾಲೇಜು ಪ್ರಾರಂಭವಾಗಿರುವುದರಿಂದ ಇಲ್ಲಿಯೇ 6 ರಿಂದ ದ್ವಿತೀಯ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಲು ಅವಕಾಶ ದೊರತಂತಾಗಿದೆ ಎಂದು ಹೇಳಿದರು.

ಕರ್ನಾಟಕ ವಸತಿ ಮಂಡಳಿಯು ಈ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಯೋಜನೆ ಮತ್ತು ಅಂದಾಜು ಪಟ್ಟಿಯಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಇಲ್ಲಿಯ ಪ್ರಾಂಶುಪಾಲರು, ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲ ಮಹೇಶ್, ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆಡಿಪಿ ಸದಸ್ಯರಾದ ಔರಂಗಜೇಬ್, ವೇದಕುಮಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಪಾವನ, ದೊಡ್ಡಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್, ವಸತಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net