

ಹನೂರು: ಸಮೀಪದ ಹುಲ್ಲೇಪುರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಯಾಬೇಕಿದ್ದ ಪ್ರಜಾಸೌಧ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದು, ಶಂಕುಸ್ಥಾಪನೆ ನೆರವೇರಿ ಕಾಮಗಾರಿ ಆರಂಭವಾಗುವುದು ಯಾವಾಗ ಎಂಬುದನ್ನು ಕ್ಷೇತ್ರದ ಜನರು ಎದುರು ನೋಡುತ್ತಿದ್ದಾರೆ.
ರಾಜ್ಯದಲ್ಲಿಯೇ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕಾಗಿದ್ದ ಕೊಳ್ಳೇಗಾಲಕ್ಕೆ ಈ ಹಿಂದೆ ಹನೂರು ಸೇರಿತ್ತು. ಸುಮಾರು 120 ಕಿ.ಮೀಗೂ ಹೆಚ್ಚು ಅಂತರವನ್ನು ಹೊಂದಿರುವ ಗೋಪಿನಾಥಂ, ಪಾಲಾರ್ ಹಾಗೂ 50 ಕಿ.ಮೀ ದೂರವಿರುವ ಜಲ್ಲಿಪಾಳ್ಯ, ಗರಿಕೆಕಂಡಿ, ಹೂಗ್ಯಂ ಹಾಗೂ ಈ ಭಾಗದ ಇತರ ದೂರದ ಕಾಡಂಚಿನ ಗ್ರಾಮಗಳ ಜನರು ತಮ್ಮ ಕೆಲಸ-ಕಾರ್ಯಗಳಿಗಾಗಿ ಕೊಳ್ಳೇಗಾಲದ ಕಚೇರಿಗಳಿಗೆ ಅಲೆಯಬೇಕಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರಲ್ಲಿ ಹನೂರನ್ನು ತಾಲೂಕಾಗಿ ರಚನೆ ಮಾಡಿದ್ದು, ಇದೀಗ 6 ವರ್ಷವೇ ಕಳೆದಿದೆ. ಆದರೆ ಇಲ್ಲಿ ವಿವಿಧ ಇಲಾಖೆಯ ಕಚೇರಿಗಳಿಲ್ಲ. ಕೆಲವೊಂದು ಕಚೇರಿಗಳು ಕೊಳ್ಳೇಗಾಲದಿಂದಲೇ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಪ್ರಭಾರವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳು ಹನೂರಿನಲ್ಲಿ ತಾಲೂಕು ಕಚೇರಿಗಳಿಗಾಗಿ ಮಿನಿ ವಿಧಾನಸೌಧ ನಿರ್ಮಿಸುವಂತೆ ಹಲವು ವರ್ಷಗಳಿಂದಲೂ ಒತ್ತಾಯಿಸಿದ್ದವು. ಈ ದಿಸೆಯಲ್ಲಿ ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾಲೂಕು ಆಡಳಿತಕ್ಕಾಗಿ ಹನೂರಿಗೆ ಪ್ರಜಾಸೌಧ ಘೋಷಿಸಿದ್ದರು. ಇದರಿಂದ ಕ್ಷೇತ್ರದ ಜನರಲ್ಲಿ ಸಂತಸ ವ್ಯಕ್ತವಾಗಿತ್ತು. ಏ.24 ರಂದು ಮ.ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಅವರು ಪ್ರಜಾಸೌಧ ನಿರ್ಮಾಣಕ್ಕೆ ಅನುಮೋದನೆಯನ್ನೂ ನೀಡಿದ್ದರು.
ಶಂಕುಸ್ಥಾಪನೆಗೆ ಮುಂದಾಗದೆ ತೆರಳಿದ ಸಿಎಂ: ಈಗಾಗಲೇ ಜಾಗ ಗುರುತಿಸಿ ನಿಗದಿಪಡಿಸಲಾದ ಹುಲ್ಲೇಪುರದ ಸರ್ಕಾರಿ ಜಾಗದಲ್ಲಿ ಏ.25 ರಂದು ಅಧಿಕಾರಿಗಳ ತಂಡ ಕಟ್ಟಡ ಪ್ರಜಾಸೌಧದ ಶಂಕುಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸಿಎಂ ಅವರ ಪ್ರವಾಸ ವೇಳಾಪಟ್ಟಿಯಲ್ಲೂ ಈ ಬಗ್ಗೆ ನಮೂದಾಗಿತ್ತು. ಅದರಂತೆಯೇ ಸಿಎಂ ಅವರು ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಕಾರಿನಲ್ಲಿಯೇ ಕುಳಿತು ಟೆಂಡರ್ ಸಂಬಂಧ ಅಧಿಕಾರಿಗಳನ್ನು ವಿಚಾರಿಸಿದಾಗ ಟೆಂಡರ್ ಆಗದಿರುವುದು ಗಮನಕ್ಕೆ ಬಂತು. ಇದೀಗ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅನುಮೋದನೆಯಾಗಿದೆ. ಆದರೆ ಟೆಂಡರ್ ಆಗದೆ ಶಂಕುಸ್ಥಾಪನೆಯನ್ನು ನೆರವೇರಿಸುವುದು ಸರಿಯಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಂಕುಸ್ಥಾಪನೆ ನೆರವೇರಿಸಿದರೆ ಒಳಿತು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿ ತೆರಳಿದ್ದರು.
ಕ್ಷೇತ್ರದ ಜನರಲ್ಲಿ ಬೇಸರ: ತಾಲೂಕು ರಚನೆಯಾಗಿ 6 ವರ್ಷವೇ ಕಳೆದಿದೆ. ಆದರೆ ತಾಲೂಕಿಗೆ ಸಂಬಂಧಿಸಿದಂತೆ ಇಲಾಖೆಯ ಕಚೇರಿಗಳಿಲ್ಲ. ಇದರಿಂದ ಕ್ಷೇತ್ರದ ಜನರು ಇಂದಿಗೂ ಕೆಲವೊಂದು ಕೆಲಸ ಕಾರ್ಯಗಳ ನಿಮಿತ್ತ ಕೊಳ್ಳೇಗಾಲದ ಕಚೇರಿಗೆ ಅಲೆಯುವಂತಾಗಿದ್ದು, ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ದಿಸೆಯಲ್ಲಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಹನೂರಿಗೆ ಪ್ರಜಾಸೌಧ ಘೋಷಿಸಿದ್ದರು. ಇದರಿಂದ ಕ್ಷೇತ್ರದ ಜನರು ಹನೂರಿನಲ್ಲಿ ಪ್ರಜಾಸೌಧ ನಿರ್ಮಾಣವಾಗುತ್ತದೆ ಎಂಬ ಆಶಾಭಾವನೆ ಇತ್ತು. ಅಲ್ಲದೆ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದರು. ಆದರೆ ಏ.25 ರಂದು ಪ್ರಜಾಸೌಧ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಬೇಕಿದ್ದ ಕಾರ್ಯ ಟೆಂಡರ್ ಆಗದ ಹಿನ್ನೆಲೆಯಲ್ಲಿ ಈ ಕಾರ್ಯ ನನೆಗುದಿಗೆ ಬಿದ್ದಂತಾಗಿದೆ. ಇದರಿಂದ ಆಶಾಭಾವನೆ ಹೊಂದಿದ್ದ ಕ್ಷೇತ್ರದ ಜನತೆಯಲ್ಲಿ ನಿರಾಸೆ ಮೂಡಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಒತ್ತಾಯ: ಪ್ರಜಾಸೌಧ ನಿರ್ಮಾಣವಾದರೆ ವಿವಿಧ ಇಲಾಖೆಯ ಕಚೇರಿಗಳು ಒಂದೇ ಸೂರಿನಡಿ ಸಿಗುತ್ತವೆ. ಕಾಯಂ ಅಧಿಕಾರಿಗಳು ನೇಮಕವಾಗುತ್ತಾರೆ. ಇದರಿಂದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಅನುಕೂಲವಾಗುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪ್ರಜಾಸೌಧ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿ ಶೀಘ್ರ ಪೂರ್ಣಗೊಳಿಸುವುದರ ಮೂಲಕ ಉತ್ತಮ ಸೇವೆ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
8.6 ಕೋಟಿ ರೂ. ವೆಚ್ಚದಲ್ಲಿ ಹನೂರಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶವಾಗಿದೆ. ಈ ಸಂಬಂಧ ನೀಲನಕ್ಷೆ ತಯಾರಿಸಬೇಕಿದೆ. ಬಳಿಕ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯಬೇಕಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ತಾಂತ್ರಿಕ ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆಯಾಗಬೇಕಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ.
ಪುರುಷೋತ್ತಮ್, ಎಇಇ, ಪಿಡಬ್ಲ್ಯುಡಿ ಇಲಾಖೆ, ಕೊಳ್ಳೇಗಾಲ.
ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕು ಆಡಳಿತಕ್ಕಾಗಿ ಪ್ರಜಾಸೌಧ ಘೋಷಿಸಿದ್ದರು. ಅನುಮೋದನೆ ದೊರೆತು ಏ.25 ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರುವುದನ್ನು ತಿಳಿದು ಕ್ಷೇತ್ರದ ಜನರಲ್ಲಿ ಖುಷಿ ವ್ಯಕ್ತವಾಗಿತ್ತು. ಆದರೆ ಟೆಂಡರ್ ಆಗದ ಹಿನ್ನೆಲೆಯಲ್ಲಿ ಈ ಕಾರ್ಯ ನನೆಗುದಿಗೆ ಬಿದ್ದಿದೆ. ಸಂಬಂಧಪಟ್ಟವರು ಈ ಬಗ್ಗೆ ಮುತುರ್ವಜಿ ವಹಿಸಿ ಕಾಮಗಾರಿ ಆರಂಭಿಸಲು ಮುಂದಾಗಬೇಕು.
ಜಗದೀಶ್, ಲೊಕ್ಕನಹಳ್ಳಿ ಗ್ರಾಮಸ್ಥ