

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಹರೇಕಳ ಕಡವಿನ ಬಳಿ ಪಾರ್ಕ್ ನಿರ್ಮಿಸಿ ನದಿತಟ ಸುಂದರಗೊಳಿಸುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ನೇತೃತ್ವದ ನಿಯೋಗ ಸೋಮವಾರ ಸ್ಥಳ ಪರಿಶೀಲನೆ ನಡೆಸಿತು. ಹರೇಕಳ ನದಿಬದಿಯ ಇಕ್ಕೆಲೆಗಳಲ್ಲಿ ಈಗಾಗಲೇ ರಸ್ತೆ ನಿರ್ಮಾಣಗೊಂಡಿದ್ದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಇನ್ನಷ್ಟು ಸೌಂದರ್ಯ ವೃದ್ಧಿಸುವ ನಿಟ್ಟಿನಲ್ಲಿ ಪಾರ್ಕ್ ನಿರ್ಮಾಣಕ್ಕೆ ಮುಡಾದಿಂದ 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಆಯುಕ್ತೆ ನೂರ್ ಜಹಾನ್ ಝೊಹರಾ ಖಾನಂ ನೇತೃತ್ವ ನಿಯೋಗ ಹರೇಕಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಗ್ರಾಪಂ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದೆ. ಈ ಜಾಗದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಾಣದ ಯೋಚನೆ ಇದೆ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್ ತಿಳಿಸಿದರು. ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ., ಮಾಜಿ ಅಧ್ಯಕ್ಷರಾದ ಬದ್ರುದ್ದೀನ್ ಫರೀದ್‌ನಗರ, ಅನಿತಾ ಡಿಸೋಜ, ಸದಸ್ಯ ಅಬ್ದುಲ್ ಸತ್ತಾರ್ ನ್ಯೂಪಡ್ಪು ಮತ್ತಿತರರು ಉಪಸ್ಥಿತರಿದ್ದರು. ಹರೇಕಳ ನದಿಬದಿ ಪಾರ್ಕ್ ನಿರ್ಮಾಣಕ್ಕೆ ಯೋಚಿಸಲಾಗಿದ್ದು, ಮುಡಾದಿಂದ ಅನುದಾನ ಮೀಸಲಿಡಲಾಗಿದೆ. ಜಮೀನು ಕಂದಾಯ ಇಲಾಖೆ ಅಧೀನದಲ್ಲಿದ್ದು, ಮುಡಾಕ್ಕೆ ಹಸ್ತಾಂತರಿಸಿದ ಬಳಿಕ ಕೆಲಸ ಆರಂಭಿಸಲಾಗುವುದು.