

ಶಿವಮೊಗ್ಗ: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಮತ್ತು ಕೊಠಡಿಗಳನ್ನು ಹಂತ ಹಂತವಾಗಿ ದುರಸ್ತಿ ಮಾಡಲಾಗುತ್ತಿದೆ. 1,600 ಕೊಠಡಿ ರಿಪೇರಿ ಮತ್ತು ಅವಶ್ಯವಿರುವೆಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಮಂಜೂರಾತಿ ದೊರೆಯಲಿದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆ ಹಾಗೂ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹೊಸದಾಗಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಿದ್ದು, ಕೆಪಿಎಸ್‌ನಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮ, ಎಲ್‌ಕೆಜಿ, ಯುಕೆಜಿ, ಲೈಬ್ರರಿ ಸೇರಿ ಉತ್ತಮ ಸೌಲಭ್ಯಗಳು ದೊರೆಯಲಿವೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಡಿಡಿಪಿಐ ಹಾಗೂ ಬಿಇಒಗಳು ಹೆಚ್ಚು ಗಮನ ನೀಡಬೇಕು. ಶಾಲಾ ಹಾಜರಾತಿ ಕುರಿತು ಸುಳ್ಳು ಹೇಳುವಂತಿಲ್ಲ. ಪರಿಣಾಮಕಾರಿಯಾಗಿ ಸ್ಯಾಟ್ಸ್ ತಂತ್ರಾಂಶ ಬಳಸಬೇಕು ಎಂದು ಸೂಚಿಸಿದರು.
ವರ್ಷದಲ್ಲಿ ಮೂರು ಪರೀಕ್ಷೆ ನಡೆಸುತ್ತಿದ್ದು, ನಕಲು ಮಾಡಲು ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು 10ನೇ ತರಗತಿವರೆಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲೇ ಅತ್ಯುತ್ತಮ ಶಿಕ್ಷಕರಿದ್ದಾರೆ. ಹಾಗಾಗಿ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಸಂಜೆ ಪಾಠ ವ್ಯವಸ್ಥೆ ಮಾಡಿದಲ್ಲಿ ಫಲಿತಾಂಶ ಹೆಚ್ಚಲಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಶೇ. 100 ಫಲಿತಾಂಶ ಬರಬೇಕು. ಹೆಮ್ಮೆಯಿಂದ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಆಗಬೇಕು ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಮೂರು ಮತ್ತು ಪ್ರತಿ ತಾಲೂಕುಗಳಿಂದ ತಲಾ ಮೂರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಪಂ ಸಿಇಒ ಎನ್.ಹೇಮಂತ್, ಶಿಕ್ಷಕರ ಸಂಘದ ಸಿದ್ದಬಸಪ್ಪ, ಧರ್ಮಪ್ಪ, ರಾಘವೇಂದ್ರ, ಹರಿಪ್ರಸಾದ್ ಇದ್ದರು.