ಗ್ರಾಮೀಣ ಮಕ್ಕಳ ಶಿಕ್ಷಣದಿಂದ ದೇಶ ಸದೃಢ

nadoja
ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ರಮಣಶ್ರೀ ಗ್ರೂಪ್ ಮುಖ್ಯಸ್ಥ ನಾಡೋಜ ಎಸ್.ಷಡಕ್ಷರಿ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ, ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಗೇಶ್ ಶಾನುಭಾಗ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಶತಮಾನ ಕಂಡ ಶಾಲೆಗೆ ನನ್ನದೊಂದು ಕಿರುಕಾಣಿಕೆ ನೀಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆದಾಗ ದೇಶ ಸದೃಢವಾಗುತ್ತದೆ ಎಂದು ಬೆಂಗಳೂರಿನ ರಮಣಶ್ರೀ ಗ್ರೂಪ್ ಸಂಸ್ಥೆ ಮುಖ್ಯಸ್ಥ ನಾಡೋಜ ಎಸ್.ಷಡಕ್ಷರಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದು, ಕುಟುಂಬ ಸಮೇತರಾಗಿ ಬೈಂದೂರು ತಾಲೂಕಿನ ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ರಂಗಮಂದಿರ ಹಾಗೂ ಎರಡು ತರಗತಿ ಕೋಣೆಗಳನ್ನು ವೀಕ್ಷಿಸಿ ಮಾತನಾಡಿದರು.

ಶತಮಾನೋತ್ಸವದ ಸಂದರ್ಭದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರಿನ ರಮಣಶ್ರೀ ಗ್ರೂಪ್ ಸಂಸ್ಥೆ ಮುಂದೆ ಬಂದಿದ್ದು ವಾಲ್ಮೀಕಿ ಜಯಂತಿಯಂದು ಬೆಳಗ್ಗೆ ಶಾಲೆಗೆ ಭೇಟಿ ನೀಡಿ ನಾಡೋಜ ಎಸ್.ಷಡಕ್ಷರಿ ಅವರು 25 ಲಕ್ಷ ರೂ.ದೇಣಿಗೆ ನೀಡುವುದಾಗಿ ತಿಳಿಸಿದರು. ಬಳಿಕ ವಾಲ್ಮೀಕ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ, ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಗೇಶ್ ಶಾನುಭಾಗ್, ಮುಖ್ಯ ಶಿಕ್ಷಕಿ ಪದ್ಮಾವತಿ, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಬಿಜೂರು ಗ್ರಾಪಂ ಸದಸ್ಯ ವೀರೇಂದ್ರ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಮ್ಮೂರಿನ ಸರ್ಕಾರಿ ಶಾಲೆಗಳು ನಮ್ಮದು ಎಂಬ ಭಾವನೆ ಎಲ್ಲರಲ್ಲಿಯೂ ಇದ್ದು, ಎಲ್ಲರೂ ಒಟ್ಟಾಗಿ ಹೋಗಿ ಉದ್ಯಮಿಗಳನ್ನು, ಶಿಕ್ಷಣಾಭಿಮಾನಿಗಳನ್ನು ಹಾಗೂ ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರು ಒಳ್ಳೆಯ ಕಾರ್ಯಕ್ಕೆ ಖಂಡಿತವಾಗಿಯೂ ಕೈಜೋಡಿಸುತ್ತಾರೆ.-ಗುರುರಾಜ್ ಗಂಟಿಹೊಳೆ ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net