ಮಹಲ್-ಕೆಮ್ಮಣ್ಣುಗುಂಡಿ ಸಂಪರ್ಕ ರಸ್ತೆ ನಿರ್ಮಾಣ

ಸಿಕೆಎಂ ೨
Published on

ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಗುರಿಹೊಂದಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಇಂದು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಅತ್ತಿಗುಂಡಿಯಿ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ಮಹಲ್‌ನಿಂದ ಕೆಮ್ಮಣ್ಣುಗುಂಡಿ ಸಂಪರ್ಕಿಸುವ ರಸ್ತೆಗೆ ಸುಮಾರು 33 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬಂದಿದೆ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ ನೀಡಿರುವ 14 ಕೋಟಿ ರೂ. ವಿಶೇಷ ಅನುದಾನದಲ್ಲಿ ಅತ್ತಿಗುಂಡಿ ಗ್ರಾಪಂಗೆ 1ಕೋಟಿ ರೂ ಕಾಂಕ್ರೀಟ್ ರಸ್ತೆ ಕಾಮಗಾರಿ, ಕೊಳಗಾಮೆಗೆ ಹೋಗುವ ರಸ್ತೆಗೆ 1.50 ಕೋಟಿ ರೂ. ವೆಚ್ಚದ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಈ ಭಾಗದಲ್ಲಿ ಹೆಚ್ಚು ಮಳೆಯಾಗುವುದರಿಂದ ರಸ್ತೆಗಳು ಹಾನಿಯಾಗುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಂಡು ಶೀಘ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಿಸಬೇಕು ಎಂದು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರಸಭೆ ಸದಸ್ಯ ಶಾದಬ್‌ಆಲಂ ಖಾನ್, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷ ಶಾಂತಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net