

ಮಂಡ್ಯ: ಅರ್ಧದಲ್ಲೇ ನಿಂತಿರುವ ಕ್ಯಾನ್ಸರ್ ಕೇಂದ್ರದ ಕಾಮಗಾರಿಯನ್ನು 5 ಕೋಟಿ ರೂ ವೆಚ್ಚದಲ್ಲಿ ಶೀಘ್ರದಲ್ಲಿಯೇ ಮರು ಪ್ರಾರಂಭ ಮಾಡಲಾಗುವುದು. ಅಂತೆಯೇ ಒಂದು ವರ್ಷದೊಳಗಾಗಿ ಕಾಲೇಜು ಹಾಗೂ ಆಸ್ಪತ್ರೆಯನ್ನು ಅಭಿವೃದ್ಧಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮಿಮ್ಸ್‌ನಲ್ಲಿ ವಿಧಿವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉಪನ್ಯಾಸಕರ ಕೊಠಡಿ ಹಾಗೂ ಶವಾಗಾರ ಕಟ್ಟಡದ ಕಾಮಗಾರಿಗೆ ಸರ್ಕಾರದಿಂದ 4 ಕೋಟಿ ರೂ ಹಣ ಮಂಜೂರಾಗಿದೆ. ಇನ್ನು ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಹಳ ಅಭಿವೃದ್ಧಿ ಕಾರ್ಯ ಬಾಕಿ ಇದ್ದು, ಲೋಕಸಭಾ ಚುನಾವಣೆಯ ನಂತರ ಅದನ್ನು ಸಂಪೂರ್ಣಗೊಳಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಸಿಎಸ್‌ಆರ್ ಅನುದಾನದಡಿ ಸುಲಭ ಶೌಚಗೃಹ ಮತ್ತು ಡಾರ್ಮೆಂಟರಿ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಹಿಂದಿರುವ ರಸ್ತೆ ಹಾಳಾಗಿದ್ದು, ಶಾಸಕ ರವಿಕುಮಾರ್ ಗಣಿಗ ಅವರು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ. ಸರ್ಕಾರದ ಆದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಡಿಸಿ ಮತ್ತು ಜಿಪಂ ಸಿಇಒ ಬಹಳ ಸಹಕಾರಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ನಗರವನ್ನು ಸೌಂದರ್ಯಗೊಳಿಸಲು ಹೈಟೆಕ್ ಸ್ಟೀಲ್ ನಾಮಫಲಕವನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಪ್ರಾಂಶುಪಾಲ ಡಾ.ತಮ್ಮಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉದ್ಯಮಿ ಸ್ಟಾರ್ ಚಂದ್ರು ಇತರರಿದ್ದರು.